ಇತ್ತೀಚೆಗೆ ಸಂಭವಿಸಿದ ಸರಣಿ ಅಪಘಾತಗಳ ಹಿನ್ನೆಲೆಯಲ್ಲಿ ಬಿಬಿಎಂಪಿಯ 652 ಕಸ ಸಾಗಾಣಿಕೆ ವಾಹನಗಳಿಗೆ ಸಂಚಾರ ವಿಭಾಗದ ಪೊಲೀಸರು ಹಾಗೂ ಬಿಬಿಎಂಪಿ ಅಧಿಕಾರಿಗಳು ಬಿಸಿ ಮುಟ್ಟಿಸಿದ್ದು, ಸಂಚಾರ ನಿಯಮ ಉಲ್ಲಂಘಿಸಿದ 307 ವಾಹನಗಳ ವಿರುದ್ಧ ಬುಧವಾರ ಪ್ರಕರಣ ದಾಖಲಿಸಿದ್ದಾರೆ.
ಕೆಲ ದಿನಗಳಲ್ಲಿ ಬಿಬಿಎಂಪಿ ಕಸ ಸಾಗಾಣಿಕೆ ವಾಹನಗಳಿಂದ ಅಪಘಾತ ಕೃತ್ಯಗಳು ಹೆಚ್ಚಾಗುತ್ತಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗಿದ್ದವು. ಈ ಹಿನ್ನೆಲೆಯಲ್ಲಿ ಆ ವಾಹನಗಳ ಕಾರ್ಯಾನಿರ್ವಹಣೆ ಪರಿಶೀಲಿಸುವ ಸಲುವಾಗಿ ಬಿಬಿಎಂಪಿ ಅಧಿಕಾರಿಗಳು ಮತ್ತು ಪೊಲೀಸರು ಜಂಟಿಯಾಗಿ ವಿಶೇಷ ಕಾರ್ಯಾಚರಣೆ ನಡೆಸಿದರು.
ನಗರ ಸಂಚಾರ ವಿಭಾಗದ ಮೂರು ವಲಯಗಳಾದ ಪಶ್ಚಿಮ (258), ಪೂರ್ವ (353), ಉತ್ತರ (41) ವ್ಯಾಪ್ತಿಯಲ್ಲಿ ಒಟ್ಟು 652 ಕಸ ಸಾಗಾಣಿಕೆ ವಾಹನಗಳನ್ನು ತಪಾಸಣೆ ನಡೆಸಲಾಯಿತು.
ಈ ಪೈಕಿ ಕಸ ವಿಲೇವಾರಿ ವಾಹನದ ಚಾಲಕ ಮದ್ಯ ಸೇವಿಸಿರುವುದು ಪತ್ತೆಯಾಯಿತು. ಅಲ್ಲದೆ, ಸಾಗಾಣಿಕೆ ಸಾಮರ್ಥ್ಯ ಹೊಂದಿಲ್ಲದ ಹಾಗೂ ಚಾಲನಾ ಪರವಾನಗಿ ಇಲ್ಲದ ಹೀಗೆ ಸಂಚಾರ ನಿಯಮ ಉಲ್ಲಂಘಿಸಿದ ಆರೋಪದ ಮೇರೆಗೆ 9 ವಾಹನಗಳನ್ನು ಜಪ್ತಿ ಮಾಡಲಾಗಿತ್ತು, 307 ವಾಹನಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಈ ಪೈಕಿ 59 ಮಂದಿಯ ವಿರುದ್ಧ ಸಮವಸ್ತ್ರ ಧರಿಸದ ಆರೋಪದ ಮೇಲೆ. 49 ಚಾಲಕರ ವಿರುದ್ಧ ನೋ ಎಂಟ್ರಿ ಝೋನ್ಗಳಲ್ಲಿ ವಾಹನ ಚಲಾಯಿಸಿದ್ದಕ್ಕಾಗಿ, ಅವರಲ್ಲಿ 43 ಮಂದಿ ದೋಷಯುಕ್ತ ನೋಂದಣಿ ನಂಬರ್ ಪ್ಲೇಟ್ ಬಳಸಿದ್ದಕ್ಕಾಗಿ, ಇನ್ನೂ 43 ಮಂದಿ ಲೇನ್ ಶಿಸ್ತು ಉಲ್ಲಂಘಿಸಿದ್ದಕ್ಕಾಗಿ, 24 ಚಾಲಕರ ವಿರುದ್ಧ ಪಾರ್ಕಿಂಗ್ ನಿಯಮ ಉಲ್ಲಂಘಿಸಿದ್ದಕ್ಕಾಗಿ, 23 ಮಂದಿ ವಿರುದ್ಧ ಸಿಗ್ನಲ್ ಜಂಪ್ ಮಾಡಿದ್ದಕ್ಕಾಗಿ, 19 ಚಾಲಕರು ವಾಹನ ಚಾಲನೆ ಮಾಡುವ ವೇಳೆ ಮೊಬೈಲ್ ಫೋನ್ ಬಳಸಿದ್ದಕ್ಕಾಗಿ, ಒಂಬತ್ತು ಮಂದಿ ಪರವಾನಗಿ ಇಲ್ಲದೆ ವಾಹನ ಚಲಾಯಿಸಿದ್ದಾಕ್ಕಾಗಿ, 9 ಮಂದಿ ದಾಖಲೆಗಳಿಲ್ಲದೆ ವಾಹನ ಚಲಾಯಿಸಿದ್ದಕ್ಕಾಗಿ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.
ಇನ್ನೂ ಕೆಲವರ ವಿರುದ್ಧ ದೋಷಪೂರಿತ ಸೈಲೆನ್ಸರ್, ಫುಟ್ಪಾತ್ ಪಾರ್ಕಿಂಗ್, ಅಜಾಗರೂಕ ಚಾಲನೆ, ವಿಮಾ ಪ್ರಮಾಣ ಪತ್ರ ಇಲ್ಲದ, ಥ್ರಿಲ್ ಹಾರ್ನ್ ಸೇರಿದಂತೆ ಇತರೆ ಪ್ರಕರಣಗಳು ದಾಖಲಾಗಿವೆ.