ಹಾಸನ ಕ್ಷೇತ್ರದಲ್ಲಿ ಭವಾನಿ ರೇವಣ್ಣ ಅವರು ಮುಂದಿನ ಚುನಾವಣೆಯಲ್ಲಿ ಸ್ಪರ್ಧೆ ಮಾಡಿ ಶಾಸಕಿಯಾಗಿ ಆಯ್ಕೆ ಆಗುತ್ತಾರೆ ಎಂಬ ಮಾತಿಗೆ, ಹೆಚ್ಡಿ ಕುಮಾರಸ್ವಾಮಿ ಆಕ್ಷೇಪ ವ್ಯಕ್ತಪಡಿಸಿದ್ದು ಪಕ್ಷದ ಕಾರ್ಯಕರ್ತರಿಗೆ ಟಿಕೇಟ್ ನೀಡುತ್ತೇವೆ ಎಂದು ಹೇಳಿದ್ದಾರೆ.
ಇಂದು ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಭವಾನಿ ರೇವಣ್ಣ ಅವರು ಈಗಾಗಲೇ ಸಕ್ರಿಯ ರಾಜಕಾರಣದಲ್ಲಿದ್ದಾರೆ. ಹೊಸದಾಗಿ ಅವರೇನು ಬರ್ತಾ ಇಲ್ಲ. ಜಿ.ಪಂಚಾಯತ್ ಸದಸ್ಯರಾಗಿ ಕೆಲಸ ಮಾಡಿದ್ದಾರೆ. ಆದರೆ, ಹಾಸನದಲ್ಲಿ ಈ ಚುನಾವಣೆಗೆ ಟಿಕೇಟ್ ಕೊಡುವ ಬಗ್ಗೆ ಯಾವುದೇ ನಿರ್ಣಯಗಳಾಗಿಲ್ಲ. ಹಿಂದೆ ಈ ಕ್ಷೇತ್ರದಲ್ಲಿ ಪ್ರಕಾಶ್ ಎಂಬ ನಿಷ್ಠಾವಂತ ಶಾಸಕರಿದ್ದರು. ಅವರ ಕುಟುಂಬಕ್ಕೆ ಟಿಕೇಟ್ ನೀಡಬೇಕು ಎಂಬುದು ಕಾರ್ಯಕರ್ತರ ಅಭಿಪ್ರಾಯವಿದೆ. ಜನರ, ಕಾರ್ಯಕರ್ತರ ಅಭಿಪ್ರಾಯಗಳ ವಿರುದ್ಧವಾಗಿ ನಾವು ಹೋಗಲ್ಲ. ಹಾಸನದಲ್ಲಿ ಹಲವಾರು ಜನ ಅಭ್ಯರ್ಥಿಗಳಿದ್ದಾರೆ. ಯಾರಿಗೆ ಟಿಕೇಟ್ ನೀಡಬೇಕು ಎಂಬುದರ ಬಗ್ಗೆ ಪಕ್ಷ ತೀರ್ಮಾನ ಮಾಡುತ್ತದೆ ಎಂದು ಹೇಳಿದ್ದಾರೆ.
ಇಂದು ಬೆಳಿಗ್ಗೆಯಷ್ಟೇ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಹೆಚ್ಡಿ ರೇವಣ್ಣನವರು, ಹಾಸನದಲ್ಲಿ ಯಾರು ಸ್ಪರ್ಧಿಸಬೇಕೆಂದು ಪಕ್ಷ ತೀರ್ಮಾನಿಸುತ್ತೆ. MLCಗೂ ಭವಾನಿ ರೇವಣ್ಣರನ್ನ ನಿಲ್ಲಿಸುವಂತೆ ಒತ್ತಾಯಿಸಿದ್ದರು. ಭವಾನಿ ಯಾವತ್ತಾದರೂ ಒಂದು ದಿನ ಶಾಸಕಿಯಾಗುತ್ತಾರೆ. ಭವಾನಿ ಮೇಡಂ MLA ಆಗೋದನ್ನ ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಹೇಳಿದ್ದರು.