ಪಿಎಸ್ಐ ನೇಮಕಾತಿ ಪರೀಕ್ಷೆ ಅಕ್ರಮದಲ್ಲಿ ಸಿಐಡಿಯಿಂದ ತಲೆ ಮರೆಸಿಕೊಂಡಿರುವ ದಿವ್ಯಾ ಹಾಗರಗಿ ಸೇರಿ 6 ಜನರಿಗೆ ನ್ಯಾಯಾಲಯ ಖಡಕ್ ಎಚ್ಚರಿಕೆ ಕೊಟ್ಟಿದೆ. ಮುಂದಿನ ಒಂದು ವಾರದಲ್ಲಿ ಶರಣಾಗದೇ ಹೋದರೆ ಆಸ್ತಿ ಮುಟ್ಟುಗೋಲಿಗೆ ನ್ಯಾಯಲಯ ಆದೇಶ ನೀಡಿದೆ. ಕರ್ನಾಟಕದ ಅಪರಾಧ ಪ್ರಕರಣಗಳಲ್ಲಿ ಇಂತಹ ಅರೆಸ್ಟ್ ವಾರೆಂಟ್ ಜಾರಿ ಆಗಿರುವುದು ಬಹು ಅಪರೂಪ.
ಪಿಎಸ್ಐ ನೇಮಕಾತಿ ಪರೀಕ್ಷಾ ಅಕ್ರಮದ ಮಾಸ್ಟರ್ ಮೈಂಡ್ ದಿವ್ಯಾ ಹಾಗರಗಿ, ಮಂಜುನಾಥ್ ಮೇಳಕುಂದಿ, ರವೀಂದ್ರ ಮೇಳಕುಂದಿ, ಅರ್ಚನಾ, ಕಾಶಿನಾಥ್, ಶಾಂತಿಬಾಯಿಗೆ ಕಲಬುರಗಿಯ 3ನೇ ಜೆಎಂಎಫ್ಸಿ ನ್ಯಾಯಾಲಯ ಇಂತಹದೊಂದು ಅರೆಸ್ಟ್ ವಾರೆಂಟ್ ಜಾರಿ ಮಾಡಿದೆ. ಆ ಮೂಲಕ ತಲೆ ಮರೆಸಿಕೊಂಡು ತಿರುಗಾಡುತ್ತಿದ್ದ ಆರೋಪಿಗಳಿಗೆ ಬಿಸಿ ಮುಟ್ಟಿಸಿದೆ. ಮುಂಬೈ ಬ್ಲಾಸ್ಟ್ ಪ್ರಕರಣದಲ್ಲಿ ದಾವುದ್ ಇಬ್ರಾಹಿಂಗೆ ನೀಡಲಾಗಿದ್ದ ಅರೆಸ್ಟ್ ವಾರೆಂಟ್ ಉಲ್ಲೇಖಿಸಿ ಸಿಐಡಿ ಪೊಲೀಸರು ನ್ಯಾಯಾಲಯಕ್ಕೆ ಕೋರಿಕೆ ಸಲ್ಲಿಸಿದ್ದರು. ಈ ಮನವಿಯನ್ನು ನ್ಯಾಯಾಲಯ ಅಂಗೀಕರಿಸಿ ಆದೇಶ ನೀಡಿದೆ.
ಒಂದು ವಾರದ ಒಳಗಡೆ ಆರೋಪಿಗಳು ಶರಣಾಗದಿದ್ದರೆ, ಉದ್ಘೋಷಿತ ಅಪರಾಧಿ ಎಂದು ಆಸ್ತಿ ಮುಟ್ಟುಗೋಲು ಹಾಕಿಕೊಳ್ಳವ ಎಲ್ಲಾ ಸಾಧ್ಯತೆ ಇದೆ. ಕಳೆದ 15 ದಿನಗಳಿಂದ ದಿವ್ಯಾ ಸೇರಿ 6 ಮಂದಿ ಆರೋಪಿಗಳು ಸಿಐಡಿಯಿಂದ ತಲೆ ಮರೆಸಿಕೊಂಡಿದ್ದಾರೆ. ಸಾಕಷ್ಟು ಶೋಧ ನಡೆಸಿದರೂ ಸಿಐಡಿಗೆ ಈ ಆರೋಪಿಗಳ ಸುಳಿವು ಸಿಗುತ್ತಿಲ್ಲ.