ಪಿಎಸ್ಐ ಪರೀಕ್ಷೆಯಲ್ಲಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೋರ್ವ ಮಹಿಳಾ ಆರೋಪಿಯನ್ನು ಸಿಐಡಿ ಪೊಲೀಸರು ಬಂಧಿಸಿದ್ದಾರೆ.
ಜ್ಯೋತಿ ಪಾಟೀಲ್ ಬಂಧಿತ ಮಹಿಳೆ. ಪಿಎಸ್ಐ ಪರೀಕ್ಷೆಯಲ್ಲಿ ಭಾಗಿಯಾಗಿದ್ದ ಮಹಿಳಾ ಅಭ್ಯರ್ಥಿಗಳಿಗೆ ಕಿಂಗ್ ಪಿನ್ ಗಳ ಪರಿಚಯ ಮಾಡಿಸಿ ಆ ಮೂಲಕ ಡೀಲ್ ಕುದುರಿಸಿದ್ದ ಆರೋಪ ಜ್ಯೋತಿ ಪಾಟೀಲ್ ಮೇಲಿದೆ.
ಮಹಿಳಾ ಪಿಎಸ್ಐ ಅಭ್ಯರ್ಥಿ ಶಾಂತಿಬಾಯಿಗೆ ಕಿಂಗ್ ಪಿನ್ ಪರಿಚಯ ಮಾಡಿಸಿದ್ದರು ಎನ್ನುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ಆರೋಪಿ ಜ್ಯೋತಿ ಪಾಟೀಲ್ ಗ್ರಾಮೀಣಾಭಿವೃದ್ಧಿ ಇಲಾಖೆಯ ನೌಕರಳಾಗಿದ್ದಾಳೆ. ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ಈಕೆ ಕೆಲವು ತಿಂಗಳುಗಳ ಹಿಂದೆ ಕಲಬುರ್ಗಿಯ ಶಹಾಪುರ ನಗರಸಭೆಗೆ ವರ್ಗಾವಣೆಯಾಗಿ ಬಂದಿದ್ದರು.
ಪಿಎಸ್ಐ ಅಕ್ರಮ ನೇಮಕಾತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ವರೆಗೆ 17 ಜನ ಆರೋಪಿಗಳನ್ನು ಬಂಧಿಸಲಾಗಿದೆ. ಪ್ರಮುಖ ಆರೋಪಿ ದಿವ್ಯಾ ಹಾಗರಗಿಯವರಿಗಾಗಿ ಸಿಐಡಿ ಪೊಲೀಸರು ಬಲೆ ಬೀಸಿದ್ದಾರೆ.
2017-18 ರಲ್ಲಾದ ಪಿಎಸ್ಐ ನೇಮಕಾತಿಯಲ್ಲಿಯೂ ಅಕ್ರಮ ನಡೆದಿದೆ. ಇದರಲ್ಲಿ 18 ಜನರನ್ನು ಹೆಸರಿಸಿ ಅಭ್ಯರ್ಥಿಯೊಬ್ಬರು ಕಲಬುರ್ಗಿ ಪೊಲೀಸ್ ವರಿಷ್ಠಾಧಿಕಾರಿಗೆ ಇಂದು ದೂರು ಸಲ್ಲಿಸಿದ್ದಾರೆ.
ಪಿಎಸ್ಐ ಅಕ್ರಮ ನೇಮಕಾತಿ ಪ್ರಕರಣದಿಂದ ಹಲವು ಇಲಾಖೆಗಳ ಅಕ್ರಮ ನೇಮಕದ ಮಾಹಿತಿ ಹೊರಬೀಳುತ್ತಿದೆ. ಮುಂದೆ ಈ ಪ್ರಕರಣದ ತನಿಖೆ ಎಲ್ಲಿಯವರೆಗೆ ಬಂದು ನಿಲ್ಲುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ.