ಪಿಎಸ್ಐ ನೇಮಕಾತಿ ಪರೀಕ್ಷೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಕ್ಕೆ ಸಂಬಂಧಿಸಿದಂತೆ ಕಲಬುರ್ಗಿಯ ಜ್ಞಾನಜ್ಯೋತಿ ಇಂಗ್ಲಿಷ್ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕ ಕಾಶಿನಾಥ ಇಂದು ಸೋಮವಾರ ಮುಂಜಾನೆ ಸಿಐಡಿ ಅಧಿಕಾರಿಗಳ ಎದುರು ಶರಣಾಗಿದ್ದಾರೆ.
ಸಿಐಡಿ ವಶದಲ್ಲಿರುವ ಪ್ರಮುಖ ಆರೋಪಿ, ಬಿಜೆಪಿ ನಾಯಕಿ ದಿವ್ಯಾ ಹಾಗರಗಿ ಅವರ ಒಡೆತನದ ಈ ಶಾಲೆಯ ಪರೀಕ್ಷಾ ಕೇಂದ್ರದಲ್ಲಿ ಅಕ್ರಮ ನಡೆದಿದೆ ಎಂದು ಸಿಐಡಿ ತನಿಖೆಯಲ್ಲಿ ತಿಳಿದುಬಂದಿತ್ತು. ಆ ಬೆನ್ನಲ್ಲೇ, ಶಾಲೆಯ ಮುಖ್ಯ ಶಿಕ್ಷಕ ಕಾಶಿನಾಥ ತಲೆಮರೆಸಿಕೊಂಡಿದ್ದರು.
ವಿಚಾರಣೆ ವೇಳೆ ಬಂಧಿತಳಾಗಿರುವ ದಿವ್ಯಾ ಹಾಗರಗಿಯವರು ವಿಚಾರಣೆಯಲ್ಲಿ ತಮ್ಮ ಶಾಲೆಯ ಮುಖ್ಯಶಿಕ್ಷಕ ಕಾಶಿನಾಥ ಅವರೇ ಯೋಜನೆ ರೂಪಿಸಿದ್ದರು ಎಂದು ಹೇಳಿಕೆ ನೀಡಿದ್ದರು.
ಪ್ರಕರಣದ ಇನ್ನೊಬ್ಬ ಪ್ರಮುಖ ಆರೋಪಿ ಸಹಾಯಕ ಎಂಜಿನಿಯರ್ ಮಂಜುನಾಥ ಮೇಳಕುಂದಿ ಭಾನುವಾರವಷ್ಟೇ ಸಿಐಡಿಗೆ ಶರಣಾಗಿದ್ದರು. ಪ್ರಕರಣ ಬಯಲಿಗೆ ಬರಲು ಕಾರಣರಾಗಿದ್ದ ಶ್ರೀಧರ ಪವಾರ ಅವರನ್ನು ಭಾನುವಾರ ಬಂಧಿಸಲಾಗಿದೆ.