ಸಂಪುಟ ಪುನಾರಚನೆಯ ಬಗ್ಗೆ ಹೈಕಮಾಂಡ್ ತೀರ್ಮಾನಕ್ಕೆ ನಾವು ಬದ್ಧರಾಗಿರುತ್ತೇವೆ. ಅದರ ಬಗ್ಗೆ ಹೇಳಲು ನಾವ್ಯಾರು? ಕೇಂದ್ರ ನಾಯಕರ ತೀರ್ಮಾನವೇ ಇದರಲ್ಲಿ ಅಂತಿಮ. ಇನ್ನು ಮೂರು ದಿನಗಳಲ್ಲಿ ಸಂಪುಟ ಪುನಾರಚನೆಯಾಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.
ದುಬೈ ಪ್ರವಾಸಕ್ಕೆ ಹೊರಟ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ದುಬೈ ಬಸವ ಸಮಿತಿಯಿಂದ ನಾಳೆ ಯಡಿಯೂರಪ್ಪನವರಿಗೆ ಬಸವ ಭೂಷಣ ಪ್ರಶಸ್ತಿ ಪ್ರದಾನ ನಡೆಯಲಿದೆ. ಸೋಮವಾರ ಬಿಎಸ್ ವೈ ಮರಳಿ ಬೆಂಗಳೂರಿಗೆ ಬರಲಿದ್ದಾರೆ.
ಬಹಳ ಜನ ಪಕ್ಷಕ್ಕೆ ಇನ್ನೂ ಬರುವವರಿದ್ದಾರೆ. ನಮ್ಮ ಪಕ್ಷ ಇನ್ನಷ್ಟು ಬಲವಾಗಲಿದೆ. ಪ್ರತಿ ಜಿಲ್ಲೆಯಿಂದಲೂ ಪಕ್ಷಕ್ಕೆ ಬರುತ್ತಾರೆ. ಅದರಲ್ಲೂ ಮಂಡ್ಯದಿಂದ ಅನೇಕ ಜನ ಪಕ್ಷಕ್ಕೆ ಸೇರ್ಪಡೆ ಆಗಲಿದ್ದಾರೆ. 150 ಸ್ಥಾನ ಗೆಲ್ಲುವುದು ನಮ್ಮ ಗುರಿ. ಪ್ರಧಾನಿಯವರಿಗೆ 150 ಕ್ಷೇತ್ರ ಗೆಲ್ಲುವ ಭರವಸೆ ಕೊಟ್ಟಿದ್ದೇವೆ. ಆ ಗುರಿ ಮುಟ್ಟಲು ರಾಜ್ಯ ಪ್ರವಾಸ ಮಾಡುತ್ತೇವೆ ಎಂದರು.
ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಯತ್ನಾಳ್ ಹೇಳಿಕೆ ಬಗ್ಗೆ ನಾನೇನೂ ಮಾತನಾಡುವುದಿಲ್ಲ. ಪಕ್ಷದ ನಾಯಕರು ಅದನ್ನು ನೋಡಿಕೊಳ್ಳುತ್ತಾರೆ ಎಂದರು.