ತಮ್ಮನ್ನು ಸಿಎಂ ಮಾಡಲು 2,500 ಕೋ.ರೂ ಕೇಳಿದ್ದರು ಎಂಬ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಹೇಳಿಕೆಯನ್ನು ಆಧರಿಸಿ ಕಾಂಗ್ರೆಸ್ ಪಕ್ಷ ಬಿಜೆಪಿಯ ವಿರುದ್ಧ ತೀವ್ರ ವಾಗ್ದಾಳಿ ನಡೆಸುತ್ತಿದೆ. ಇದೀಗ, ವಿರೋಧಪಕ್ಷದ ನಾಯಕ ಸಿದ್ದರಾಮಯ್ಯನವರು ಬಿಜೆಪಿ ಪಕ್ಷದ ಸಿಎಂರನ್ನು ಪೇಮೆಂಟ್ ಸಿಎಂ ಎಂದು ಕರೆದಿದ್ದಾರೆ. ಹಾಗೆಯೇ, ಶಾಸಕ ಯತ್ನಾಳ್ರನ್ನು ವಿಚಾರಣೆ ನಡೆಸಿದರೆ ಬಿಜೆಪಿಯ ಭ್ರಷ್ಟಾಚಾರ ಬಹಿರಂಗವಾಗುತ್ತದೆ ಎಂದು ಹೇಳಿದ್ದಾರೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು, ತಮ್ಮನ್ನು ಮುಖ್ಯಮಂತ್ರಿ ಮಾಡಲು ದೆಹಲಿಯವರು 2,500 ಕೋಟಿ ರೂಪಾಯಿ ಕೇಳಿದ್ದರು ಎಂಬ ಬಿಜೆಪಿ ಶಾಸಕ ಬಸವನಗೌಡ ಪಾಟೀಲ ಅವರ ಆರೋಪ ಗಂಭೀರ ಸ್ವರೂಪದ್ದಾಗಿದ್ದು, ಸೂಕ್ತ ತನಿಖೆಯಿಂದ ಮಾತ್ರ ಇದರ ಹಿಂದಿನ ಸತ್ಯಾಸತ್ಯತೆ ಬಹಿರಂಗವಾಗಲು ಸಾಧ್ಯ.
ಯತ್ನಾಳ್ ಆರೋಪದ ಬಗ್ಗೆ ತನಿಖೆ ನಡೆಸದೆ ಇದ್ದರೆ ಬಿಜೆಪಿ ನಾಯಕರಿಗೆ ಸಾವಿರಾರು ಕೋಟಿ ರೂಪಾಯಿ ತೆತ್ತು ಮುಖ್ಯಮಂತ್ರಿಯಾಗಿರುವುದನ್ನು ಬೊಮ್ಮಾಯಿ ಅವರೇ ಒಪ್ಪಿಕೊಂಡಂತಾಗುತ್ತದೆ. ಅದರ ನಂತರ ಬೊಮ್ಮಾಯಿ ಅವರಿಗೆ ಮುಖ್ಯಮಂತ್ರಿ ಕುರ್ಚಿಯಲ್ಲಿ ಕೂರುವ ಯಾವ ನೈತಿಕತೆ ಇರುವುದಿಲ್ಲ.
ಬಸವನಗೌಡ ಪಾಟೀಲ್ ಯತ್ನಾಳ್ ಅವರು ಮಾತನಾಡುತ್ತಿರುವುದನ್ನು ಕೇಳಿದರೆ ಅವರ ಬಳಿ ಬಿಜೆಪಿ ಸರ್ಕಾರದ ಭ್ರಷ್ಟಾಚಾರದ ಬಗ್ಗೆ ಅಗಾಧವಾದ ಮಾಹಿತಿ ಇದ್ದಂತೆ ಕಾಣುತ್ತಿದೆ. ಅವರನ್ನು ವಿಚಾರಣೆ ನಡೆಸಿ ಆ ಮಾಹಿತಿಯನ್ನು ಪಡೆದರೆ ತನಿಖೆಯೂ ಸಲೀಸಾಗುತ್ತದೆ, ಸತ್ಯವೂ ಹೊರಬರುತ್ತದೆ.
ಬಿಜೆಪಿಯಲ್ಲಿ ಮುಖ್ಯಮಂತ್ರಿಯನ್ನು ಶಾಸಕಾಂಗ ಪಕ್ಷ ಆಯ್ಕೆಮಾಡುತ್ತದೆ ಎಂದು ಜನ ತಿಳಿದುಕೊಂಡಿದ್ದರು. ಇದು ಹರಾಜಿನ ಮೂಲಕ ಮಾರಾಟವಾಗುವ ‘ಪೇಮೆಂಟ್ ಸೀಟು’ ಎನ್ನುವುದು ಶಾಸಕ ಯತ್ನಾಳ್ ಆರೋಪದಿಂದ ಬಯಲಾಗಿದೆ. ಈ ಸೀಟಿಗಾಗಿ ಹಿಂದಿನ ಮತ್ತು ಈಗಿನ ಮುಖ್ಯಮಂತ್ರಿಗಳು ಎಷ್ಟು ದುಡ್ಡು ಕೊಟ್ಟಿದ್ದಾರೆ ಎನ್ನುವುದೂ ಬಹಿರಂಗವಾಗಬೇಕು.
“ಪೇಮೆಂಟ್ ಸೀಟುಗಳು” ಕೇವಲ ಮುಖ್ಯಮಂತ್ರಿ ಕುರ್ಚಿಗೆ ಸೀಮಿತವಾಗಿಲ್ಲ, ಸಚಿವ ಸ್ಥಾನಗಳನ್ನೂ ಈ ರೀತಿ ಹರಾಜು ಕೂಗಲಾಗಿದೆ ಎನ್ನುವ ಆರೋಪ ಇದೆ. ಬಿಜೆಪಿಗೆ ಪಕ್ಷಾಂತರ ಮಾಡಿದ ಶಾಸಕರು ಯಾರಿಗೆ ಮತ್ತು ಎಷ್ಟು ದುಡ್ಡು ಸಂದಾಯ ಮಾಡಿದ್ದಾರೆ ಎನ್ನುವುದೂ ತನಿಖೆಯಾಗಬೇಕು.
ಮುಖ್ಯಮಂತ್ರಿ ಮತ್ತು ಸಚಿವರಾಗಲು ಪೇಮೆಂಟ್ ಮಾಡಿದವರು ಅದರ ವಸೂಲಿಗಾಗಿಯೇ ಈಗ ಕಮಿಷನ್ ದಂಧೆ ಮತ್ತು ಅಕ್ರಮ ವ್ಯವಹಾರಕ್ಕೆ ಇಳಿದಿದ್ದಾರೆ. ಇದರಿಂದ ಒಬ್ಬ ಅಮಾಯಕ ಗುತ್ತಿಗೆದಾರ ಜೀವ ಕಳೆದುಕೊಂಡ, ಸಾವಿರಾರು ಅಮಾಯಕ ಪಿಎಸ್ಐ ಹುದ್ದೆ ಆಕಾಂಕ್ಷಿಗಳು ಭವಿಷ್ಯ ಕಳೆದುಕೊಂಡರು ಎಂದು ಸಿದ್ದರಾಮಯ್ಯನವರು ಇಜೆಪಿಯ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. .