545 ಪಿಎಸ್ಐ ಹುದ್ದೆಗಳ ನೇಮಕಾತಿ ಹಗರಣ ಪ್ರಕರಣ ಸಂಬಂಧ ಸಿಐಡಿ ಅಧಿಕಾರಿಗಳು ಅಕ್ರಮದ ಮಾಸ್ಟರ್ ಮೈಂಡ್ DySP ಶಾಂತಕುಮಾರ್ ಅವರನ್ನು ಬಂಧಿಸಿದ್ದಾರೆ.
ಗುರುವಾರ ಮಧ್ಯಾಹ್ನ ನೇಮಕಾತಿ ವಿಭಾಗದ ಶಾಂತಕುಮಾರ್ ಅವರನ್ನು ಕರೆತಂದು ಸಿಐಡಿ ಅಧಿಕಾರಿಗಳು ವಿಚಾರಣೆ ನಡೆಸಿದ್ದರು. ವಿಚಾರಣೆ ಬಳಿಕ ಅವರನ್ನು ಬಂಧಿಸಲಾಗಿದೆ. 2 ದಿನಗಳ ಹಿಂದಷ್ಟೇ ನೇಮಕಾತಿ ವಿಭಾಗದ ನಾಲ್ವರು ಅಧಿಕಾರಿಗಳನ್ನು ಸಿಐಡಿ ಅಧಿಕಾರಿಗಳು ಬಂಧಿಸಿದ್ದರು. ಪಿಎಸ್ಐ ನೇಮಕಾತಿ ಅಕ್ರಮ ಬಯಲು ಆದಾಗಿನಿಂದ ಶಾಂತಕುಮಾರ್ ಹೆಸರು ಓಡಾಡುತ್ತಿತ್ತು. ಕಳೆದ 2 ದಿನದ ಹಿಂದೆ ಶಾಂತಕುಮಾರ್ಗೆ ವಿಚಾರಣೆಗೆ ಹಾಜರಾಗುವಂತೆ ಸಿಐಡಿ ತಿಳಿಸಿತ್ತು.
ಪಿಎಸ್ಐ ನೇಮಕಾತಿ ಅಕ್ರಮದಲ್ಲಿ ಡಿವೈಎಸ್ಪಿ ಶಾಂತಕುಮಾರ್ ಕೈವಾಡ ಇರುವ ಶಂಕೆ ವ್ಯಕ್ತವಾಗಿತ್ತು. ಸುಮಾರು 10 ವರ್ಷಗಳಿಗೂ ಹೆಚ್ಚು ಕಾಲ ನೇಮಕಾತಿ ವಿಭಾಗದಲ್ಲಿ ಶಾಂತಕುಮಾರ್ ಡಿವೈಎಸ್ಪಿಯಾಗಿ ಕರ್ತವ್ಯ ನಿರ್ವಹಿಸಿದ್ದರು. ಪಿಎಸ್ಐ ಅಕ್ರಮ ಪ್ರಕರಣ ಹೊರಬರುತ್ತಲೇ ಅವರನ್ನು ಎತ್ತಂಗಡಿ ಮಾಡಲಾಗಿತ್ತು. ಈ ನೇಮಕಾತಿ ಹಗರಣದ ಮೊದಲನೇ ಕಿಂಗ್ಪಿನ್ ಶಾಂತಕುಮಾರ್ ಆಗಿದ್ದಾರೆ ಎನ್ನಲಾಗಿದೆ.