ಸಿಎಂ ಬೊಮ್ಮಾಯಿಗೆ ಆರ್ಎಸ್ಎಸ್ ತಡರಾತ್ರಿ ದಿಢೀರ್ ಬುಲಾವ್ ನೀಡಿರುವುದು, ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಖಚಿತ ಎಂಬ ವಾದಕ್ಕೆ ಇಂಬು ನೀಡಿದಂತಾಗಿದೆ.
ದೆಹಲಿಯಿಂದ ವಾಪಾಸು ರಾಜ್ಯಕ್ಕೆ ಮರಳಿರುವ ಸಿಎಂ ಬೊಮ್ಮಾಯಿ ಶುಕ್ರವಾರ ಬೆಳಿಗ್ಗೆಯಷ್ಟೇ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದರು.
ಶುಕ್ರವಾರ ತಡರಾತ್ರಿ ಸಿಎಂಗೆ ಆರ್ಎಸ್ಎಸ್ ಮುಖಂಡರಿಂದ ಬುಲಾವ್ ಬಂದಿದ್ದ ಹಿನ್ನೆಲೆಯಲ್ಲಿ, ಚಾಮರಾಜಪೇಟೆಯ ಕೇಶವ ಕೃಪಾಕ್ಕೆ ಭೇಟಿ ನೀಡಿ ಆರ್ಎಸ್ಎಸ್ ಮುಖಂಡರ ಜೊತೆ ಅರ್ಧ ಗಂಟೆ ಕಾಲ ಮಹತ್ವದ ಚರ್ಚೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ರಾಜ್ಯದಲ್ಲಿ ನಾಯಕತ್ವ ಬದಲಾವಣೆಗ ಚರ್ಚೆಯ ನಡುವೆಯೇ ಆರ್ಎಸ್ಎಸ್ ಹಾಗೂ ಸಿಎಂ ಬೊಮ್ಮಾಯಿಯವರ ಭೇಟಿ ಕುತೂಹಲ ಮೂಡಿಸಿದೆ.
ದೆಹಲಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಸಿಎಂ ಬೊಮ್ಮಾಯಿ ಮುಂದಿನ ಒಂದು ವಾರದಲ್ಲಿ ಏನಾದರೂ ಆಗಬಹುದು ಎಂಬ ಸೂಚ್ಯ ಹೇಳಿಕೆಯನ್ನು ನೀಡಿದ್ದರು. ದೆಹಲಿಯಿಂದ ಬಂದ ಬಳಿಕ ಬೊಮ್ಮಾಯಿಯವರು ಗುಪ್ತ ನಡೆಯನ್ನು ಕಾಯ್ದುಕೊಂಡಿದ್ದಾರೆ.
ಬೊಮ್ಮಾಯಿಯವರ ಈ ನಡೆ ಸಂಪುಟ ಸಹೋದ್ಯೋಗಿಗಳ ಸಮೇತ ಯಾವುದೇ ಶಾಸಕರಿಗೆ ಅರ್ಥ ಆಗಿಲ್ಲ. ಇಂದು ಬಿಜೆಪಿಯ ಕೋರ್ ಕಮಿಟಿ ಸಭೆ ಇದೆ. ಈ ಸಭೆಯಲ್ಲಿ ಸಿಎಂ ಬೊಮ್ಮಾಯಿ ದೆಹಲಿಯ ಭೇಟಿಯ ಬಗ್ಗೆ ಮೌನ ಮುರಿಯುತ್ತಾರಾ ಎಂದು ಕಾಯ್ದುನೋಡಬೇಕಿದೆ.
ನಾಯಕತ್ವ ಬದಲಾವಣೆಯ ಚರ್ಚೆಯ ನಡುವೆ, ಸಿಎಂ ಬೊಮ್ಮಾಯಿಯವರು ದೆಹಲಿಯಿಂದ ವಾಪಾಸಾದ ಬಳಿಕ ಬಿಎಸ್ ಯಡಿಯೂರಪ್ಪನವರ ಭೇಟಿ, ಆರ್ಎಸ್ಎಸ್ ಮುಖಂಡರ ಭೇಟಿ, ಮತ್ತು ಅವರ ಮೌನ ನೋಡಿದರೆ ಸಿಎಂ ಬದಲಾವಣೆಯ ಖಚಿತ ಎಂಬ ಚೆರ್ಚೆಗೆ ಪುಷ್ಠಿ ನೀಡಿದಂತಾಗಿದೆ.