23 ವರ್ಷದ ಯುವತಿ ಮೇಲಿನ ಅತ್ಯಾಚಾರದ ಆರೋಪಕ್ಕೆ ಸಂಬಂಧಿಸಿದಂತೆ ರಾಜಸ್ಥಾನದ ಸಚಿವ ಮಹೇಶ್ ಜೋಶಿ ಅವರ ಪುತ್ರ ರೋಹಿತ್ ನನ್ನು ಬಂಧಿಸಲು ದೆಹಲಿ ಪೊಲೀಸರು ತಂಡವೊಂದು ಇಂದು ಬೆಳಗ್ಗೆ ಜೈಪುರಕ್ಕೆ ಆಗಮಿಸಿದ್ದು, ಹುಡುಕಾಟ ನಡೆಸುತ್ತಿದೆ.
ನಗರದಲ್ಲಿರುವ ಸಚಿವರ ಎರಡು ಮನೆಗಳಿಗೆ ಪೊಲೀಸ್ ಭೇಟಿ ನೀಡಿದಾಗ ಆರೋಪಿ ಅಲ್ಲಿರಲಿಲ್ಲ. ಪ್ರಕರಣಕ್ಕೆ ಸಂಬಂಧಿಸಿದಂತೆ ಪರಾರಿಯಾಗಿರುವ ಜೋಶಿಯನ್ನು ಹಿಡಿಯಲು ನಮ್ಮ ಅಧಿಕಾರಿಗಳ ತಂಡ ಜೈಪುರ ತಲುಪಿದ್ದು, ಆತನ ಪತ್ತೆಗೆ ನಮ್ಮ ತಂಡಗಳು ಶೋಧ ನಡೆಸುತ್ತಿವೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮೇ 18 ರೊಳಗೆ ರೋಹಿತ್ ಜೋಷಿ ವಿಚಾರಣೆಗೆ ಹಾಜರಾಗುವಂತೆ ದೆಹಲಿ ಪೊಲೀಸರು ಸಮನ್ಸ್ ನ್ನು ಸಚಿವರ ಮನೆ ಹೊರಗಡೆ ಅಂಟಿಸಿದ್ದಾರೆ.
ಕಳೆದ ವರ್ಷ ಜನವರಿ 8 ರಿಂದ ಈ ವರ್ಷದ ಏಪ್ರಿಲ್ 17 ರವರೆಗೆ ಸಚಿವರ ಪುತ್ರ ಮದುವೆಯಾಗುವುದಾಗಿ ನಂಬಿಸಿ ಅನೇಕ ಬಾರಿ ಅತ್ಯಾಚಾರ ಮಾಡಿರುವುದಾಗಿ ಯುವತಿ ದೂರಿನಲ್ಲಿ ತಿಳಿಸಿದ್ದಾಳೆ. ಕಳೆದ ವರ್ಷ ಫೇಸ್ ಬುಕ್ ನಲ್ಲಿ ರೋಹಿತ್ ಜೋಷಿ ಗೆಳೆತನ ಆರಂಭವಾಗಿತ್ತು. ಆಗಿನಿಂದಲೂ ಸಂಪರ್ಕದಲ್ಲಿದ್ದು, ರೋಹಿತ್ ಶರ್ಮಾ ಅಪಹರಣ ಮಾಡಿ, ಬ್ಲಾಕ್ ಮೇಲ್ ಮಾಡಿದ್ದಾಗಿ ಆರೋಪಿಸಿದ್ದಾಳೆ.
ಮೊದಲ ಭೇಟಿ ವೇಳೆಯಲ್ಲಿ ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿದ್ದರು. ಮರು ದಿನ ಎದ್ದಾಗ ಬೆತ್ತಲೆ ದೇಹವನ್ನು ಚಿತ್ರೀಕರಣ ಮಾಡಲಾಗಿತ್ತು ಎಂದು ಯುವತಿ ಎಫ್ ಐಆರ್ ನಲ್ಲಿ ತಿಳಿಸಿದ್ದಾಳೆ. ಈ ಮಧ್ಯೆ ಆರೋಪಿಯನ್ನು ರಕ್ಷಿಸಲು ರಾಜ್ಯ ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಬಿಜೆಪಿ ಆರೋಪಿಸಿದೆ.