ಪಿಎಸ್ಐ ಪರೀಕ್ಷಾ ಹಗರಣದ ತನಿಖೆ ಮುಂದುವರೆದಿದ್ದು, ಪ್ರಮುಖ ಆರೋಪಿಗಳು ಸೇರಿದಂತೆ ಹಲವರನ್ನು ಬಂಧಿಸಲಾಗಿದೆ. ಪಿಎಸ್ಐ ನೇಮಕಾತಿ ಪರೀಕ್ಷೆ ಅಕ್ರಮದಿಂದಾಗಿ ಪ್ರಾಮಾಣಿಕವಾಗಿ ಪರೀಕ್ಷೆ ಬರೆದು ಪಾಸಾದ ಅಭ್ಯರ್ಥಿಗಳು ನಿತ್ಯ ಕಣ್ಣೀರಿಡುತ್ತಿದ್ದಾರೆ. ಈ ಮಧ್ಯೆ, ನೊಂದ ಅಭ್ಯರ್ಥಿಗಳು ಪ್ರಧಾನಿ ನರೇಂದ್ರ ಮೋದಿಗೆ ರಕ್ತದಲ್ಲಿ ಪತ್ರ ಬರೆದಿದ್ದು, ತಮಗೆ ನ್ಯಾಯ ಒದಗಿಸದಿದ್ದಲ್ಲಿ, ಭಯೋತ್ಪಾದನೆಗೆ ಸೇರುತ್ತೇನೆ ಎಂದು ನೊಂದು ಹೇಳಿದ್ದಾರೆ.
ರಕ್ತದಲ್ಲಿ ಪತ್ರ ಬರೆದಿರುವ ಅಭ್ಯರ್ಥಿಗಳು, ಪಿಎಸ್ಐ ಪರೀಕ್ಷೆಯಲ್ಲಿ ವಂಚನೆ ಮಾಡಿದವರನ್ನ ಜೈಲಿಗೆ ಹಾಕಬೇಕು. ಪ್ರಮಾಣಿಕವಾಗಿ ಬರೆದವರಿಗೆ ನ್ಯಾಯ ಕೊಡಿಸಿ. ಮರುಪರೀಕ್ಷೆ ನಡೆಸಿದರೆ ಅನ್ಯಾಯವಾಗಲಿದೆ. ನಿಮ್ಮ ಮೇಲೆ ನಮಗೆ ಗೌರವ ಇದೆ ಮೋದಿಜೀ, ನಮಗೆ ನ್ಯಾಯ ಕೊಡಿಸಿ.
ನಾವು ಮಾನಸಿಕವಾಗಿ ಸತ್ತುಹೋಗಿದ್ದೇವೆ. ನಾವು ಮುಂದೆ ಯಾವ ಸರ್ಕಾರಿ ಹುದ್ದೆ ಪರೀಕ್ಷೆ ಬರೆಯಲ್ಲ. ಒಂದು ವೇಳೆ ನ್ಯಾಯಕೊಡಿಸದೇ ಹೋದ್ರೆ ನಾವು ಮುಂದೆ ಭಯೋತ್ಪಾದಕ ಸಂಘಟನೆ ಸೇರಲು ಇಚ್ಚಿಸಿದ್ದೇವೆ. ಅವರಿಂದ ಒಂದಷ್ಟು ಹಣ ಪಡೆದು ಕುಟುಂಬ ಸಾಕ್ತೇವೆ ಎಂದು ಪತ್ರದಲ್ಲಿ ಬರೆದಿದ್ದಾರೆ.
ಪತ್ರ ಬರೆದು ಅಭ್ಯರ್ಥಿಗಳು ತಮ್ಮ ಹೆಸರು ಹಾಗೂ ತಮ್ಮ ವಿಳಾಸವನ್ನು ಪತ್ರದಲ್ಲಿ ನಮೂದಿಸಿಲ್ಲ.
ಪಿಎಸ್ಐ ಪರೀಕ್ಷಾ ಅಕ್ರಮಕ್ಕೆ ಸಂಬಂಧಿಸಿದಂತೆ ಸಿಐಡಿ ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಪ್ರಮುಖ ಆರೋಪಿಗಳಾದ ದಿವ್ಯಾ ಹಾಗರಗಿ, ವೀರೇಶ್, ವೈಜನಾಥ್, ಮಂಜುನಾಥ್ ಮೇಳಕುಂದಿ ಸೇರಿದಂತೆ 55ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಿದ್ದಾರೆ.
https://youtu.be/PIY7X7wa7QM