ಉಗ್ರರಿಗೆ ಆರ್ಥಿಕ ಸಹಾಯ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಶ್ಮೀರಿ ಪ್ರತ್ಯೇಕತಾವಾದಿ ನಾಯಕ ಯಾಸಿನ್ ಮಲಿಕ್ ಅಪರಾಧಿ ಎಂದು ದೆಹಲಿಯ ವಿಶೇಷ ಎನ್ಐಎ ನ್ಯಾಯಾಲಯ ತೀರ್ಪು ನೀಡಿದೆ.
2017 ರಲ್ಲಿ ಕಾಶ್ಮೀರಿ ಕಣಿವೆಯಲ್ಲಿ ನಡೆದಿದ್ದ ಉಗ್ರ ಚಟುವಟಿಕೆಗಳಿಗೆ ಆರ್ಥಿಕ ಸಹಾಯ ನೀಡಿದ ಪ್ರಕರಣದಲ್ಲಿ ಯಾಸಿನ್ ಮಲಿಕ್ ಕೋರ್ಟ್ಗೆ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾನೆ. ಯಾಸಿನ್ ಮಲಿಕ್ ವಿರುದ್ಧ ಕಾನೂನು ಬಾಹಿರ ಚಟುವಟಿಕೆಗಳ (ಯುಎಪಿಎ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.
ಯಾಸಿನ್ ಮಲಿಕ್ ವಿರುದ್ಧ ಯುಎಪಿಎ ಕಾಯ್ದೆಯ ಸೆಕ್ಷನ್ 16(ಭಯೋತ್ಪಾದನೆ), 17 ( ಭಯೋತ್ಪಾದನೆಗೆ ನಿಧಿ ಸಂಗ್ರಹ), 18 ( ಭಯೋತ್ಪಾದನಾ ಕೃತ್ಯಕ್ಕೆ ಸಂಚು) ಹಾಗೂ 20 ( ಭಯೋತ್ಪಾದಕ ಸಂಗಟನೆಯ ಸದಸ್ಯನಾಗಿರುವುದು), 120 ಬಿ (ಅಪರಾಧ ಸಂಚು) ಮತ್ತು ಭಾರತೀಯ ದಂಡ ಸಂಹಿತೆಯ 124 ಎ ( ದೇಶದ್ರೋಹ) ಪ್ರಕರಣಗಳನ್ನು ದಾಖಲಿಸಲಾಗಿತ್ತು.
ನ್ಯಾಯಾಲಯಲ್ಲಿ ಹಾಜರಾಗಿದ್ದ ಯಾಸೀನ್ ಮಲಿಕ್ ತನ್ನ ಮೇಲಿನ ಪ್ರಕರಣಗಳನ್ನು ವಿರೋಧಿಸಿಲ್ಲ ಹಾಗೂ ಭಯೋತ್ಪಾದನಾ ಸಂಘಟನೆಗೆ ಆರ್ಥಿಕ ನೆರವು ಒದಗಿಸಿರುವ ಬಗ್ಗೆ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾನೆ ಎಂದು ತಿಳಿದು ಬಂದಿದೆ.