ಕರಾವಳಿ ನಿಯಂತ್ರಣ ವಲಯ ವ್ಯಾಪ್ತಿಗೆ ಬರುವ ನದಿಗಳಲ್ಲಿ ತೆಗೆದ ಮರಳನ್ನು ಮಾರುವಂತಿಲ್ಲ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ ಚೆನ್ನೈ ಪೀಠ ಮಹತ್ವ ಆದೇಶ ನೀಡಿದೆ.
ಈ ಆದೇಶ ಕರ್ನಾಟಕದ ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಅನ್ವಯ ಆಗಲಿದೆ.
`ಕರಾವಳಿ ನಿಯಂತ್ರಣದ ವಲಯದ ವ್ಯಾಪ್ತಿಗೆ ಬರುವ ನದಿಯಲ್ಲಿ ತೆಗೆಯಲಾಗುವ ಮರಳನ್ನು ಮಾರುವಂತಿಲ್ಲ. ಬದಲಿಗೆ ಕೆಳಮಟ್ಟದಲ್ಲಿರುವ ನದಿ ತಟಗಳನ್ನು ಸಮತೋಲನ ಮಾಡಲು, ತೀರ ಪ್ರದೇಶದಲ್ಲಿ ಮರಳು ಪೋಷಣೆಗೆ, ನದಿ ಗೋಡೆಗಳ ಬಲವರ್ಧನೆಗಷ್ಟೇ ಬಳಸಬಹುದು’ ಎಂದು ಹಸಿರು ನ್ಯಾಯಮಂಡಳಿಯ ನ್ಯಾ.ಕೆ ರಾಮಕೃಷ್ಣನ್ ಮತ್ತು ಸತ್ಯಗೋಪಾಲ್ ಕೋರ್ಲಪಾಟಿ ಇ ಎಂ ಅವರಿದ್ದ ಪೀಠ ಆದೇಶ ನೀಡಿದೆ.
`ಶುಲ್ಕ ಸಂಗ್ರಹಿಸಿ ನದಿಯಲ್ಲಿ ಮರಳುಗಾರಿಕೆಗೆ ಮತ್ತು ಆ ಮರಳನ್ನು ಮಾರಲು ಅನುಮತಿ ನೀಡುವ ಸರ್ಕಾರದ ಕ್ರಮವನ್ನು ಕರಾವಳಿ ನಿಯಂತ್ರಣ ವಲಯದಡಿ ನಿರ್ಬಂಧಿಸಲಾಗಿದೆ. ಈ ಪದ್ಧತಿ ತಕ್ಷಣವೇ ನಿಲ್ಲಬೇಕು’ ಹಸಿರು ನ್ಯಾಯಮಂಡಳಿ ಹೇಳಿದೆ.
`ಮರಳು ತೆಗೆಯುವುದಕ್ಕೆ ಅನುಮತಿ ಪಡೆದಿರುವವರು ಅಥವಾ ಅವರ ಕುಟುಂಬದವರಷ್ಟೇ ಮರಳು ತೆಗೆಯಬಹುದು. ಇವರು ಮರಳು ತೆಗೆಯುವುದಕ್ಕೆ ಕೇವಲ ಸಾಂಪ್ರದಾಯಿಕ ಪದ್ಧತಿಯ ಮೂಲಕವಷ್ಟೇ ಮರಳು ತೆಗೆಯಬೇಕು. ದೋಣಿಗಳ ಮೂಲಕ ಮರಳು ತೆಗೆಯಬಹುದಷ್ಟೇ. ಮರಳುಗಾರಿಗೆ ಉಪಗುತ್ತಿಗೆಯನ್ನಾಗಲೀ ಅಥವಾ ಹೊರಗಿನ ಕಾರ್ಮಿಕರನ್ನು ಬಳಸುವಂತಿಲ್ಲ’ ಎಂದು ನ್ಯಾಯ ಮಂಡಳಿ ಆದೇಶದಲ್ಲಿ ಹೇಳಿದೆ.
ಬ್ರಹ್ಮಾವರ ತಾಲೂಕಿನ ಉದಯ ಸುವರ್ಣ ಮತ್ತು ಉಡುಪಿ ತಾಲೂಕಿನ ಕಲ್ಯಾಣಪುರದ ದಿನೇಶ್ ಕುಂದರ್ ಅವರು 2017ರಲ್ಲಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿ ನ್ಯಾಯಮಂಡಳಿ ಈ ತೀರ್ಪು ನೀಡಿದೆ.
`ಸೌಪರ್ಣಿಕ, ವರಾಹಿ, ಪಾಪನಾಶಿನಿ, ಸ್ವರ್ಣ, ಸೀತಾ, ಎಡಮಾವಿನ ಹೊಳೆಯಲ್ಲಿ 28 ಕಡೆಗಳಲ್ಲಿ ಮರಳು ತೆಗೆಯಲು 178 ಮಂದಿಗೆ ಅನುಮತಿ ನೀಡಲಾಗಿದೆ. ನದಿ ತಟದವರೆಗೂ ಮರಳು ತೆಗೆಯಲಾಗುತ್ತಿದ್ದು, ಅತಿಯಾದ ಗಣಿಗಾರಿಕೆ ಆಗುತ್ತಿದೆ ಮತ್ತು ವಲಸೆ ಕಾರ್ಮಿಕರನ್ನು ಬಳಸಿ ಮರಳು ಗಣಿಗಾರಿಕೆಯನ್ನು ಮಾಡುತ್ತಿರುವ ಈ ಹಿಂದೆ ನ್ಯಾಯಮಂಡಳಿ ನೀಡಿದ್ದ ತೀರ್ಪಿಗೆ ವಿರುದ್ಧವಾಗಿದೆ’ ಅರ್ಜಿಯಲ್ಲಿ ವಾದಿಸಿದ್ದರು.