ರಾಜ್ಯದ 1 ರಿಂದ 10 ನೇ ತರಗತಿಯ ವರೆಗಿನ ಪಠ್ಯಪುಸ್ತಕ ಮರು ಪರಿಶೀಲನಾ ಸಮಿತಿಯ ಅಧ್ಯಕ್ಷರಾಗಿದ್ದ ರೋಹಿತ್ ಚಕ್ರತೀರ್ಥ ಅವರನ್ನೇ ಪದವಿ ಪೂರ್ವ ಶಿಕ್ಷಣದ ಪಠ್ಯ ಪುಸ್ತಕ ಪರಿಶೀಲನಾ ಸಮಿತಿಗೆ ಅಧ್ಯಕ್ಷರನ್ನಾಗಿ ನೇಮಿಸುವ ಸಾಧ್ಯತೆ ದಟ್ಟವಾಗಿದೆ.
ಪಿಯುಸಿ ಪಠ್ಯ ಪರಿಶೀಲನಾ ಸಮಿತಿಗೆ ರೋಹಿತ್ ಚಕ್ರತೀರ್ಥ ಅವರನ್ನು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರು ಇದೇ ಮೇ 15 ರಂದು ಶಿಫಾರಸ್ಸು ಮಾಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿರುವ ಕಾಂಗ್ರೆಸ್ ಹಿರಿಯ ನಾಯಕ ಹೆಚ್.ಸಿ.ಮಹಾದೇವಪ್ಪ ಅವರು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರ ರಾಜೀನಾಮೆಯನ್ನು ಮುಖ್ಯಮಂತ್ರಿಗಳು ಪಡೆದುಕೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ಕುವೆಂಪು ನಾಡಗೀತೆಯನ್ನು ಈ ಮಟ್ಟಿಗೆ ಅವಮಾನಿಸುವ, ಧರ್ಮಾಂಧರು ಮಕ್ಕಳು ಏನನ್ನು ಓದಬೇಕು ಎಂಬ ಸಂಗತಿಯನ್ನು ನಿರ್ಧರಿಸುವುದು ಅಪಾಯಕಾರಿ ವಿದ್ಯಮಾನವಾಗಿದೆ. ಈ ನಾಡಿನ ನಾಡಗೀತೆಯನ್ನೇ ಅವಮಾನಿಸಿದವರಿಗೆ ಸರ್ಕಾರ ಮನ್ನಣೆ ನೀಡುತ್ತಿರುವ ಉದ್ದೇಶವಾದರೂ ಏನು..?
ಅರ್ಥಪೂರ್ಣ ವಿರೋಧದ ನಡುವೆಯೂ ಮತ್ತೆ ರೋಹಿತ್ ಚಕ್ರತೀರ್ಥನನ್ನೇ ಪಿಯುಸಿ ಪಠ್ಯ ಪುಸ್ತಕ ಸಮಿತಿಗೆ ಶಿಫಾರಸ್ಸು ಮಾಡಿರುವ ಶಿಕ್ಷಣ ಸಚಿವರಿಂದ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರು ಕೂಡಲೇ ರಾಜೀನಾಮೆ ಪಡೆದು ಸಮಾಜದ ಪರವಾದ ಕಾಳಜಿ ಉಳ್ಳ ಮತ್ತು ಜ್ಞಾನವಂತರಾದ ಶಿಕ್ಷಣ ತಜ್ಞರನ್ನು ಸಮಿತಿಗೆ ನೇಮಕ ಮಾಡಬೇಕೆಂದು ಈ ಮೂಲಕ ಒತ್ತಾಯಿಸುತ್ತೇನೆ ಎಂದು ಹೇಳಿದ್ದಾರೆ.
ಅರ್ಥಪೂರ್ಣ ವಿರೋಧದ ನಡುವೆಯೂ ಮತ್ತೆ ಈತನನ್ನೇ ಪಿಯುಸಿ ಪಠ್ಯ ಪುಸ್ತಕ ಸಮಿತಿಗೆ ಶಿಫಾರಸ್ಸು ಮಾಡಿರುವ ಶಿಕ್ಷಣ ಸಚಿವರಿಂದ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರು ಕೂಡಲೇ ರಾಜೀನಾಮೆ ಪಡೆದು ಸಮಾಜದ ಪರವಾದ ಕಾಳಜಿ ಉಳ್ಳ ಮತ್ತು ಜ್ಞಾನವಂತರಾದ ಶಿಕ್ಷಣ ತಜ್ಞರನ್ನು ಸಮಿತಿಗೆ ನೇಮಕ ಮಾಡಬೇಕೆಂದು ಈ ಮೂಲಕ ಒತ್ತಾಯಿಸುತ್ತೇನೆ@BSBommai
2/2
— Dr H C Mahadevappa(Buddha Basava Ambedkar Parivar) (@CMahadevappa) May 23, 2022
ಶಾಲಾ ಮಕ್ಕಳ ಮರು ಪಠ್ಯ ಪರಿಶೀಲನಾ ಸಮಿತಿ ಅಧ್ಯಕ್ಷರಾಗಿದ್ದ ರೋಹಿತ್ ಚಕ್ರತೀರ್ಥ ಅವರು ಶಾಲಾ ಪಠ್ಯದಲ್ಲಿ ಸೇರ್ಪಡೆ ಮಾಡಿದ್ದ ಕೆಲವು ಲೇಖಕರ ಪಾಠಗಳು ಹಾಗೂ ಭಗತ್ ಸಿಂಗ್, ನಾರಾಯಣ ಗುರು ಸೇರಿದಂತೆ ಇತರೆ ಲೇಖಕರ ಪಾಠ ಕೈಬಿಟ್ಟಿರುವ ಬಗ್ಗೆ ವಿವಾದ ಉಂಟಾಗಿದೆ.
ಭಾನುವಾರ ಟ್ವಿಟರ್ನಲ್ಲಿ ಈ ಬಗ್ಗೆ ಅಭಿಯಾನವೊಂದು ನಡೆದಿದ್ದು, ಇದರಲ್ಲಿ ಶಾಲಾ ಪಠ್ಯಪುಸ್ತಕ ರಚನೆಯಲ್ಲಿ ಕೇಸರೀಕರಣ ಹಾಗೂ ಬ್ರಾಹ್ಮಣೀಕರಣ ಸೇರ್ಪಡೆಯಾಗುತ್ತಿದೆ. ಶಿಕ್ಷಣ ಸಚಿವರು ಜವಾಬ್ದಾರಿ ಹೊತ್ತು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಲಾಗಿತ್ತು. ಈ ಅಭಿಯಾನ ಟ್ವಿಟರ್ನಲ್ಲಿ ದೇಶದ ಮಟ್ಟದಲ್ಲಿ 3 ಮತ್ತು 4 ನೇ ಸ್ಥಾನ ಪಡೆದುಕೊಂಡಿತ್ತು.