ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಸ್ವಂತ ಭಾವ ಶರತ್ ಚಂದ್ರ ಅವರು ಕಾಂಗ್ರೆಸ್ ವಿರುದ್ಧ ಬಂಡಾಯದ ಬಾವುಟ ಹಾರಿಸಿದ್ದಾರೆ.
ಶರತ್ ಚಂದ್ರ ಅವರು ಡಿಕೆ ಶಿವಕುಮಾರ್ ಅವರ ಸೋದರ ಭಾವ ಆಗಿದ್ದಾರೆ. ಚನ್ನಪಟ್ಟಣದಲ್ಲಿ ತಮಗೆ ಟಿಕೇಟ್ ನೀಡಲು ಡಿಕೆ ಶಿವಕುಮಾರ್ ನಿರಾಕರಿಸಿದ್ದಾರೆ ಎಂದು ಆರೋಪಿಸಿ ಡಿಕೆ ಶಿವಕುಮಾರ್ ಅವರ ವಿರುದ್ಧವೇ ಶರತ್ ಚಂದ್ರ ಕಿಡಿಕಾರಿದ್ದಾರೆ. ಅಲ್ಲದೇ, ಕಾಂಗ್ರೆಸ್ ಟಿಕೇಟ್ ನೀಡದೇ ಇದ್ದಲ್ಲಿ ಸ್ವತಂತ್ರವಾಗಿ ಸ್ಪರ್ಧಿಸುವ ಬಂಡಾಯದ ಭಾವುಟ ಆರಿಸಿದ್ದಾರೆ.
ಈ ಬಗ್ಗೆ ಮಾತನಾಡಿರುವ ಅವರು, ಕುಟುಂಬ ರಾಜಕಾರಣಕ್ಕೆ ಅವಕಾಶ ನೀಡಲಾಗುವುದಿಲ್ಲ ಎಂದು ಡಿಕೆ ಶಿವಕುಮಾರ್ ಹೇಳುತ್ತಾರೆ. ಆದರೆ, ಈ ನಿಯಮ ನನಗೆ ಮಾತ್ರ ಅನ್ವಯವಾಗುತ್ತದೆ ಎಂದು ಡಿಕೆಶಿ ವಿರುದ್ಧ ಕಿಡಿಕಾರಿದ್ದಾರೆ.
ನಾನು ಕಳೆದ 5 ವರ್ಷಗಳಿಂದ ಚನ್ನಪಟ್ಟಣ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಸಂಘಟಿಸಿದ್ದೇನೆ. ಆದರೆ, ಇದೀಗ ಯಾರನ್ನೋ ಅಭ್ಯರ್ಥಿ ಎಂದು ಕರೆದುಕೊಂಡು ಬಂದಿದ್ದಾರೆ. ನನ್ನ ರಾಜಕೀಯ ಭವಿಷ್ಯಕ್ಕೆ ನನ್ನ ಸಂಬಂಧಿಕರೇ ಮುಳುವಾಗಿದ್ದಾರೆ ಎಂದು ನೇರವಾಗಿ ಡಿಕೆ ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ನಾನೇನು ರಾಜಕೀಯ ಸನ್ಯಾಸಿಯಲ್ಲ. ನಮ್ಮ ಕುಟುಂಬಕ್ಕೂ ರಾಜಕೀಯ ಹಿನ್ನೆಲೆಯಿದೆ. ಚನ್ನಪಟ್ಟಣ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತೇನೆ ಎಂದು ಸ್ಪಷ್ಟಪಡಿಸಿದ್ದಾರೆ. ಅಲ್ಲದೇ, ಬೇರೆ ಪಕ್ಷ ಸೇರ್ಪಡೆಯಾಗುವ ಬಗ್ಗೆ ಕಾರ್ಯಕರ್ತರೊಡನೆ ಚರ್ಚಿಸಿ ಮಾತನಾಡಲಾಗುವುದು ಎಂದು ಹೇಳಿದ್ದಾರೆ.