ಕ್ರೀಡಾ ಚಟುವಟಿಕೆಗಳಿಗೆ ಮೀಸಲಿರಬೇಕಿದ್ದ ಕ್ರೀಡಾಂಗಣವನ್ನು ಸಾಕು ನಾಯಿಯ ವಾಯುವಿಹಾರ ಮಾಡಿಸುವುದಕ್ಕಾಗಿ ಐಎಎಸ್ ದಂಪತಿ ಅವಧಿಗೂ ಮುನ್ನವೇ ಮುಚ್ಚಿಸಿರುವ ವಿಚಿತ್ರ ವಿದ್ಯಮಾನ ದೆಹಲಿಯಲ್ಲಿ ವರದಿಯಾಗಿತ್ತು. ಈ ಬೆನ್ನಲ್ಲೇ, ಈ ದಂಪತಿಗಳಿಬ್ಬರನ್ನೂ ಕೇಂದ್ರ ಸರ್ಕಾರ ಬೇರೆ ಬೇರೆ ರಾಜ್ಯಗಳಿಗೆ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.
ಐಎಎಸ್ ಅಧಿಕಾರಿ ಸಂಜೀವ್ ಖಿರ್ವಾರ್ ಹಾಗೂ ಅವರ ಪತ್ನಿ ಐಎಎಸ್ ರಿಂಕು ದುಗ್ಗಾ ವಿರುದ್ಧ ತಮ್ಮ ಸಾಕು ನಾಯಿಯ ವಾಕಿಂಗ್ ಮಾಡಿಸಲು ಕ್ರೀಡಾಂಗಣ ಮುಚ್ಚಿಸಿದ ಆರೋಪ ಕೇಳಿಬಂದಿದೆ.
ವರದಿಗಳ ಪ್ರಕಾರ, ನಾಯಿಯನ್ನು ವಾಯುವಿಹಾರ ಮಾಡಿಸುವುದಕ್ಕೆಂದು ಐಎಎಸ್ ದಂಪತಿ ದೆಹಲಿಯ ತ್ಯಾಗರಾಜ್ ಕ್ರೀಡಾಂಗಣವನ್ನು ಅವಧಿಗೂ ಮೊದಲೇ ಮುಚ್ಚಿಸಿದ್ದರು. ಸಂಜೆ 6 ಗಂಟೆ ಒಳಗೆಯೇ ಕ್ರೀಡಾಂಗಣವನ್ನು ಮುಚ್ಚಿಸಿ ಅಥ್ಲೀಟ್ಗಳು, ತರಬೇತುದಾರರನ್ನು ಕ್ರೀಡಾಂಗಣದಿಂದ ಹೊರಹೋಗುವಂತೆ ಸೂಚಿಸಲಾಗಿತ್ತು. ಈ ವಿಚಾರ ಸಾಮಾಜಿಕ ಮಾಧ್ಯಮಗಳಲ್ಲಿಯೂ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು.
ಈ ಕುರಿತು ಗೃಹ ಸಚಿವಾಲಯವು ದೆಹಲಿ ಮುಖ್ಯ ಕಾರ್ಯದರ್ಶಿಗಳಿಂದ ವರದಿ ಕೇಳಿತ್ತು. ಮುಖ್ಯ ಕಾರ್ಯದರ್ಶಿಯವರು ಅಧಿಕಾರ ದುರ್ಬಳಕೆ ಬಗ್ಗೆ ವರದಿ ಸಲ್ಲಿಸಿದ್ದರು. ಈ ಬೆನ್ನಲ್ಲೇ, ಖಿರ್ವಾರ್ ಅವರನ್ನು ಲಡಾಖ್ಗೆ ಹಾಗೂ ಅವರ ಪತ್ನಿಯನ್ನು ಅರುಣಾಚಲ ಪ್ರದೇಶಕ್ಕೆ ವರ್ಗಾಯಿಸಲಾಗಿದೆ. ಇಬ್ಬರೂ 1994ನೇ ತಂಡದ ಐಎಎಸ್ ಅಧಿಕಾರಿಗಳಾಗಿದ್ದಾರೆ.
ಇನ್ನು, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ದೆಹಲಿಯಲ್ಲಿರುವ ಎಲ್ಲ ಕ್ರೀಡಾ ಸೌಲಭ್ಯ ಕೇಂದ್ರಗಳು ರಾತ್ರಿ 10 ಗಂಟೆಯವರೆಗೆ ಕ್ರೀಡಾಪಟುಗಳಿಗೆ ಮುಕ್ತವಾಗಿರಿಸಬೇಕು ಎಂದು ಸೂಚನೆ ನೀಡಿದ್ದಾರೆ.