ಮದುವೆಯ ನಂತರ ವರದಕ್ಷಿಣೆ ಕೇಳಿದರೂ ಕೊಡದ ಚಂದ್ರಾ ಲೇಔಟ್ನ 33 ವರ್ಷದ ಪತ್ನಿಯನ್ನು ಪತಿಯೇ ಸಂಗಮದ ಮೇಕೆದಾಟು ಜಲಪಾತದ ಬಳಿಯ ಕಾವೇರಿ ನದಿಗೆ ತಳ್ಳಿರುವ ಘಟನೆ ನಡೆದಿದೆ.
ಆರೋಪಿ ಕೆ.ಲಕ್ಕಪ್ಪ ರಜೆಯ ನೆಪದಲ್ಲಿ ಪತ್ನಿ ಮಂಗಳಾ ಅವರನ್ನು ಕರೆದುಕೊಂಡು ಹೋಗಿ ನದಿಗೆ ತಳ್ಳಿದ್ದಾನೆ. ಭಯಾನಕ ಸಂಗತಿಯೆಂದರೆ, ಮಹಿಳೆಯ ದೇಹದ ಕೆಳಗಿನ ಅರ್ಧ ಭಾಗ ಮಾತ್ರ ಪತ್ತೆಯಾಗಿದೆ, ಏಕೆಂದರೆ ಆಕೆಯನ್ನು ತಳ್ಳಿದ ಸ್ಥಳದಲ್ಲಿ ಮೊಸಳೆಗಳು ಮುತ್ತಿಕೊಂಡಿವೆ. ಇನ್ನರ್ಧ ಮೃತದೇಹವನ್ನು ಮೊಸಳೆಗಳು ತಿಂದು ಹಾಕಿರುವ ಶಂಕೆ ವ್ಯಕ್ತವಾಗಿದೆ.
ಲಕ್ಕಪ್ಪ ಅವರನ್ನು ಬಂಧಿಸಲಾಗಿದೆ. ಎರಡು ವರ್ಷಗಳ ಹಿಂದೆ ಮಂಗಳಾ ಲಕ್ಕಪ್ಪನನ್ನು ಮದುವೆಯಾಗಿದ್ದಳು. ಮಂಗಳಾ ಅವರ ಸಹೋದರ ಪಿ ಗುರುಮೂರ್ತಿ ಮಂಗಳವಾರ ದೂರು ದಾಖಲಿಸಿದ್ದಾರೆ. ಮರುದಿನ ಪೊಲೀಸರಿಗೆ ಶವದ ಅರ್ಧ ಭಾಗ ನದಿಯಲ್ಲಿ ತೇಲುತ್ತಿರುವುದು ಕಂಡು ಬಂತು. ಕೂಡಲೇ ದೂರುದಾರರಿಗೆ ಕರೆ ಮಾಡಿ ಶವವನ್ನು ಗುರುತಿಸಿದ್ದಾರೆ.
‘ಹೋಟೆಲ್ನಲ್ಲಿ ಕೆಲಸ ಮಾಡುತ್ತಿದ್ದ ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಪತಿಯಿಂದ ವರದಕ್ಷಿಣೆ ಕಿರುಕುಳ ತಾಳಲಾರದೆ ಮಂಗಳಾ ಹೆಚ್ಚಿನ ಸಮಯ ಪೋಷಕರ ಮನೆಯಲ್ಲಿಯೇ ಇರುತ್ತಿದ್ದಳು ಎನ್ನಲಾಗಿದೆ. ಸ್ಥಳೀಯ ಮೀನುಗಾರರು, ಕಾವಲುಗಾರರು ಯಾವುದೇ ಶವಗಳನ್ನು ಕಂಡಲ್ಲಿ ತಿಳಿಸಲು ಕೇಳಲಾಗಿದೆ ಎಂದು ಪೊಲೀಸರು ಹೇಳಿದರು.
ಸಂತ್ರಸ್ತೆಯ ಸಹೋದರನನ್ನು ಸಂಪರ್ಕಿಸಿದಾಗ ಪ್ರತಿಕ್ರಿಯಿಸಲು ನಿರಾಕರಿಸಿದರು. ಆರೋಪಿ ವಿರುದ್ಧ ವರದಕ್ಷಿಣೆ ಸಾವು (ಐಪಿಸಿ 304 ಬಿ) ಮತ್ತು ವರದಕ್ಷಿಣೆ ಕಿರುಕುಳ (ಐಪಿಸಿ 498 ಎ) ಪ್ರಕರಣವನ್ನು ದಾಖಲಿಸಲಾಗಿದೆ.