ಕನ್ನಡದ ರಾಕಿಂಗ್ ಸ್ಟಾರ್ ಯಶ್ ಅವರು ತಮ್ಮ ಯಶೋಮಾರ್ಗ ಸಂಸ್ಥೆಯ ಮೂಲಕ ಹಲವು ಸಾಮಾಜಿಕ ಕೆಲಸಗಳನ್ನು ಮಾಡಿಕೊಂಡು ಬರುತ್ತಿದ್ದಾರೆ. ಅದರಲ್ಲೂ ಪ್ರಮುಖವಾಗಿ ಪರಿಸರ ರಕ್ಷಣೆ, ಕೆರೆ, ಕಲ್ಯಾಣಿಗಳಗಳ ಪುನಶ್ಚೇತನಕ್ಕಾಗಿ ಈ ಸಂಸ್ಥೆ ಶ್ರಮಿಸುತ್ತಿದೆ. ಇದೀಗ ಈ ಸಂಸ್ಥೆ ಶಿವಮೊಗ್ಗ ಜಿಲ್ಲೆಯ ಆನಂದಪುರದಲ್ಲಿರುವ ಕೆಳದಿ ಅರಸರ ಪುಷ್ಕರಣಿಯೊಂದನ್ನ ಅಭಿವೃದ್ಧಿ ಪಡಿಸಿದೆ.
ಕೆಳದಿ ಅರಸರ ಕೊಡುಗೆಗೆ ಸಾಕ್ಷಿಯಾಗಿದ್ದ ಈ ಪುಷ್ಕರಣಿ, ಬಹುತೇಕ ಇದ್ದು ಇಲ್ಲದಂತಾಗಿತ್ತು. ಇದರ ಜೀರ್ಣೋದ್ಧಾರಕ್ಕೆ ಯಶೋಮಾರ್ಗ ಫೌಂಡೇಶನ್ ಮುಂದಾಗಿತ್ತು. ಈ ಸಂಬಂಧ ಮೊದಲ ಹಂತದ ಕಾಮಗಾರಿ ಪೂರ್ಣಗೊಂಡಿದ್ದು, ನಿನ್ನೆ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಹಿರಿಯ ಅಂಕಣಕಾರ, ಪರಿಸರವಾದಿ, ಜಲತಜ್ಞ ಶಿವಾನಂದ ಕಳವೆಯವರ ಜೀರ್ಣೋದ್ಧಾರಗೊಂಡ ಪುಷ್ಕರಣಿಯನ್ನು ಲೋಕಾರ್ಪಣೆಗೊಳಿಸಿದ್ದರು.
ಪುಷ್ಕರಣಿ ಲೋಕಾರ್ಪಣಾ ಕಾರ್ಯಕ್ರಮದಲ್ಲಿ ನಾಡಿನ ಹಿರಿಯ ಇತಿಹಾಸ ಸಂಶೋಧಕ ಶ್ರೀ ಕೆಳದಿ ಗುಂಡಾ ಜೋಯಿಸರಿಗೆ ಸನ್ಮಾನ, ಸಸಿ ನಾಟಿ, ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು. ಕೆಳದಿ ಅರಸರ ಕಾಲದ ಸುಮಾರು 400 ವರ್ಷಗಳ ಹಿಂದಿನ ಕೆರೆ ಇದು. ಕೆರೆ ನಿರ್ಮಾಣ ಇತಿಹಾಸದಲ್ಲಿ ಕೆಳದಿ ಅರಸರು ಸುಮಾರು 5800 ಕ್ಕೂ ಹೆಚ್ಚು ಕೆರೆ ನಿರ್ಮಿಸಿದವರು. ಇವುಗಳಲ್ಲಿ ವಿಶೇಷವಾದ ಚಂಪಕ ಸರಸು ಕೆರೆ ಹಾಳಾಗಿ ಕಲ್ಲು ಗೋಡೆಗಳ ಮೇಲೆ ಮುಳ್ಳುಕಂಟಿ, ಮರಗಳು ಆವರಿಸಿದ್ದವು.
ಇವುಗಳನ್ನು ಸ್ವಚ್ಛ ಮಾಡಿ ಕುಸಿದ ಗೋಡೆ ಪುನಃ ನಿರ್ಮಿಸಿ ಕೆರೆ ಆವರಣಕ್ಕೆ ಹೊಸ ಮೆರಗು ನೀಡಲಾಗಿದೆ. ನಟ ಶ್ರೀ ಯಶ್ ರ ಯಶೋ ಮಾರ್ಗ ತಂಡ ಸತತ ಸುಮಾರು ಐದಾರು ತಿಂಗಳು ಪರಿಶ್ರಮ ಬಳಿಕ ಈ ಕಾರ್ಯ ಮಾಡಿದೆ. ನಟ ಯಶ್ ಹಾಗೂ ತಂಡಕ್ಕೆ ಸ್ಥಳೀಯ ಇತಿಹಾಸ ಪರಂಪರೆ ಉಳಿಸಿ ಟ್ರಸ್ಟ್ ಹಾಗೂ ಸಾರ್ವಜನಿಕರು ಕಾರ್ಯಕ್ಕೆ ಸ್ಥಳೀಯರು ಸಹಕಾರ ನೀಡಿದ್ದಾರೆ.
ಯಶೋಮಾರ್ಗದ ಈ ಕೆಸಲಕ್ಕೆ ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಗಿದೆ. ಶಿವಾನಂದ ಕಳವೆಯವರು ಯಶ್ರವರ ಈ ಕಾರ್ಯವನ್ನು ಹಾಡಿಹೊಗಳಿದ್ದಾರೆ. ಈ ಬಗ್ಗೆ ತಮ್ಮ ಫೇಸ್ಬುಕ್ ಖಾತೆಯಲ್ಲಿ, ಬರೆದುಕೊಂಡಿರುವ ಅವರು ಕೆಳದಿ ಅರಸರ ಕೊಡುಗೆಗಳನ್ನು ಸಹ ವಿವರಿಸಿದ್ದಾರೆ.