ಅತ್ಯಂತ ಉದ್ದದ ಕಾಂಕ್ರಿಟ್ ರಸ್ತೆ ನಿರ್ಮಾಣ ಮಾಡಿ ಭಾರತ ವಿಶ್ವದಾಖಲೆ ಮಾಡಿ ಗಿನ್ನೆಸ್ ದಾಖಲೆಗೆ ಸೇರ್ಪಡೆಯಾಗಿದೆ ಎಂದು ಕೇಂದ್ರದ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿಯವರು ಹೇಳಿದ್ದಾರೆ.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್ಎಚ್ಎಐ) ದ ಅಡಿಯಲ್ಲಿ ರಾಜಪಥ್ ಇನ್ಪ್ರಾಕಾನ್ ಪ್ರೈ.ಲಿ ಮತ್ತು ಜಗದೀಶ್ ಕುಮಾರ್ ಅವರು ರಾಷ್ಟ್ರೀಯ ಹೆದ್ದಾರಿ ಎನ್ಎಚ್- 53 ರಲ್ಲಿ ನಿರಂತರವಾಗಿ ಕೇವಲ 5 ದಿನಗಳಲ್ಲಿ 75 ಕಿ.ಮೀ ಗಳ ಏಕಮುಖ ರಸ್ತೆಯನ್ನು ನಿರ್ಮಾಣ ಮಾಡುವ ಮೂಲಕ ವಿಶ್ವ ದಾಖಲೆ ಮಾಡಿದ್ದಾರೆ.
ಹೆದ್ದಾರಿ ಎನ್ಎಚ್-53 ರ ಮಹಾರಾಷ್ಟ್ರದ ಅಮರಾವತಿ ಹಾಗೂ ಅಂಕೋಲಾ ನಡುವೆ ಈ ರಸ್ತೆಯ ನಿರ್ಮಾಣ ಮಾಡಲಾಗಿದೆ.
ಈ ಬಗ್ಗೆ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಟ್ವೀಟ್ ಮಾಡಿದ್ದು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತು ರಾಜಪಥ್ ಇನ್ಪ್ರಾಕಾನ್ ಪ್ರೈ.ಲಿ ಗೆ ಅಭಿನಂದನೆ ಸಲ್ಲಿಸಿದ್ದಾರೆ.
ಜೂನ್ 3 ರ ಮುಂಜಾನ 7.27 ಕ್ಕೆ ರಸ್ತೆ ನಿರ್ಮಾಣ ಮಾಡಲು ಆರಂಭಿಸಿದ ಟೀಮ್ ಜೂನ್ 7 ರ ಸಾಯಂಕಾಲ 5 ಗಂಟೆಯೊಳಗಡೆ 75 ಕಿ.ಮೀ ರಸ್ತೆಯನ್ನು ನಿರ್ಮಾಣ ಮಾಡಿ ಮುಗಿಸಿದೆ. ಕೇವಲ 105 ತಾಸು 33 ನಿಮಿಷಗಳಲ್ಲಿ ರಸ್ತೆ ನಿರ್ಮಾಣ ಮಾಡಿರುವುದು ವಿಶ್ವದಾಖಲೆಯಾಗಿ ಗಿನ್ನೆಸ್ ದಾಖಲೆಗೆ ಸೇರಿದೆ.
ಈ ಕೆಲಸದಲ್ಲಿ 800 ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ನೌಕರರು, 720 ಜನ ಕಾರ್ಮಿಕರು ಈ ಯೋಜನೆಯಲ್ಲಿ ಭಾಗಿಯಾಗಿದ್ದರು.
ಇದಕ್ಕೂ ಮೊದಲು 27.25 ಕಿಮೀ ಕಾಂಕ್ರಿಟ್ ರಸ್ತೆ ನಿರ್ಮಾಣಕ್ಕಾಗಿ ಗಿನ್ನೆಸ್ ವಿಶ್ವ ದಾಖಲೆಯಾಗಿದೆ. ಈ ರಸ್ತೆಯನ್ನು ಫೆಬ್ರವರಿ 27, 2019 ರಂದು ಕತಾರ್ನ ಅಶ್ಘಾಲ್ನ ಲೋಕೋಪಯೋಗಿ ಪ್ರಾಧಿಕಾರವು ನಿರ್ಮಿಸಿದೆ. ಈ ರಸ್ತೆಯನ್ನು ನಿರ್ಮಿಸಲು 10 ದಿನಗಳನ್ನು ತೆಗೆದುಕೊಳ್ಳಲಾಗಿತ್ತು.