ಇದೇ ಜೂನ್ 21 ರಂದು ಮೈಸೂರಿನಲ್ಲಿ ವಿಶ್ವ ಯೋಗ ದಿನಾಚರಣೆ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಲಿದ್ದಾರೆ. ಆದರೆ, ವಿಶ್ವ ಯೋಗ ದಿನಾಚರಣೆ ವಿಚಾರದಲ್ಲಿಯೂ ಬಿಜೆಪಿ ಶಾಸಕ ಹಾಗೂ ಸಂಸದರ ನಡುವೆ ರಾಜಕಾರಣ ನುಸುಳಿದೆ. ಪ್ರದಾನಿ ಮೋದಿ ಬಾಗವಹಿಸುವ ಕಾರ್ಯಕ್ರಮದಲ್ಲಿ ಯೋಗಪಟುಗಳ ಸಂಖ್ಯೆಗೆ ಸಂಬಂಧಿಸಿದಂತೆ ಇಬ್ಬರ ನಡುವೆ ಭಿನ್ನ ಲೆಕ್ಕದ ಸಮಸ್ಯೆ ನುಸುಳಿದೆ.
ಮೈಸೂರು ಅರಮನೆ ಅಂಗಳದಲ್ಲಿ ವಿಶ್ವಯೋಗ ದಿನ ನಡೆಯಲಿದೆ. ಅರಮನೆ ಮೈದಾನಕ್ಕೆ ಆಗಮನಿಸಿದ್ದ ಸಂಸದ ಪ್ರತಾಪ್ ಸಿಂಹ ಹಾಗೂ ರಾಮ್ ದಾಸ್ ಮಾಧ್ಯಮಕ್ಕೆ ಹೇಳಿಕೆ ನೀಡಿದ್ದಾರೆ.
ಮೈಸೂರು ಸಂಸದ ಪ್ರತಾಪ್ ಸಿಂಹ ಮೊದಲು ಮಾಧ್ಯಮದಲ್ಲಿ ಮಾತನಾಡುತ್ತಾ, ಪ್ರಧಾನಿ ನರೇಂದ್ರ ಮೋದಿಯವರ ಜೊತೆ ಸುಮಾರು 7 ರಿಂದ 8 ಸಾವಿರ ಜನ ಯೋಗಪಟುಗಳು ಭಾಗವಹಿಸಲಿದ್ದಾರೆ ಎಂದರು. ಈ ಮಧ್ಯೆ ಮಾತನಾಡಿದ ಶಾಸಕ ರಾಮದಾಸ್ 13 ಸಾವಿರ ಜನರ ನೋಂದಣಿ ಆಗಿದೆ ಎಂಬ ಭಿನ್ನ ಲೆಕ್ಕ ನೀಡಿದ್ದಾರೆ.
ಶಾಸಕ ರಾಮ್ದಾಸ್ರ ಹೇಳಿಕೆಗೆ ಅಸಮಾದಾನಗೊಂಡ ಸಂಸದ ಪ್ರತಾಪ್ ಸಿಂಹ ‘ನಾನು ಮಾತ್ನಾಡ್ತಿದ್ದೇನೆ, ರಾಮದಾಸ್ಜೀ ಸಮಾಧಾನವಾಗಿರಬೇಕು’ ಎಂದು ಹೇಳಿದ್ದಾರೆ. ಅನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕ ರಾಮದಾಸ್, ಅವರಿಗೆ ಸರಿಯಾದ ಮಾಹಿತಿ ಇರಲಿಲ್ಲ, ಸ್ಪಷ್ಟನೆಗಾಗಿ ವಿವರಿಸಲು ಯತ್ನಿಸಿದೆ. ನಮ್ಮ ನಡುವೆ ಮನಸ್ತಾಪ ಇಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಕಳೆದ ಹಲವಾರು ದಿನಗಳಿಂದ ಶಾಸಕ ರಾಮ್ದಾಸ್ ಹಾಗೂ ಸಂಸದ ಪ್ರತಾಪ್ ಸಿಂಹ ನಡುವೆ ಮುಸುಕಿನ ಗುದ್ದಾಟ ನಡೆದಿದೆ. ಆದರೆ, ಇದೀಗ ರಾಮ್ದಾಸ್ ಇಬ್ಬರ ನಡುವಿನ ಬಿರುಕಿಗೆ ತೇಪೆ ಹಾಕುವ ಯತ್ನ ಮಾಡಿದ್ದಾರೆ.