ಚಿಕ್ಕಮ್ಮ ಸಾವಿನಿಂದ ನೊಂದ 21 ವರ್ಷದ ಯುವಕನೊಬ್ಬ ಆಕೆಯ ಉರಿಯುತ್ತಿರುವ ಚಿತೆಗೆ ಹಾರಿ ಆತ್ಮಹತ್ಯೆಗೆ ಶರಣಾಗಿರುವ ಅಘಾತಕಾರಿ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಉರಿಯುತ್ತಿರುವ ಚಿತೆಗೆ ನಮಸ್ಕರಿಸಿದ ಯುವಕ ನಂತರ ಚಿತೆಗೆ ಹಾರುವ ನಿರ್ಧಾರ ಮಾಡಿದ್ದಾನೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
ಶುಕ್ರವಾರ ಮಧ್ಯಪ್ರದೇಶದ ಸಾಗರ ಜಿಲ್ಲೆಯ ಮಜ್ಗವಾನ್ ಗ್ರಾಮದ ಜ್ಯೋತಿ ಎಂಬ ಮಹಿಳೆ ಕಾಲು ಜಾರಿ ಬಾವಿಗೆ ಬಿದ್ದು ಸಾವನ್ನಪ್ಪಿದ್ದರು. ಶನಿವಾರ ಸಾಯಂಕಾಲ ಅಂತಿಮ ವಿಧಿವಿಧಾನಗಳನ್ನು ಮುಕ್ತಾಯಗೊಳಿಸಿ, ಮೃತದೇಹವನ್ನು ಚಿತೆಯಲ್ಲಿರಿಸಿ ಬೆಂಕಿ ಹಾಕಲಾಗಿತ್ತು. ಅನಂತರ ಎಲ್ಲಾ ಸಂಬಂಧಿಕರು ಅಲ್ಲಿಂದ ತೆರಳಿದ್ದರು. ಎಲ್ಲರೂ ಅಲ್ಲಿಂದ ತೆರಳಿದ ನಂತರ ಯುವಕ ಕರಣ್ ಮರಳಿ ಚಿತಾಗಾರಕ್ಕೆ ಬಂದಿದ್ದ. ಚಿತೆಗೆ ನಮಸ್ಕರಿಸಿ ತಾನು ಚಿತೆಗೆ ಹಾರಿದ್ದ.
ಇದನ್ನ ವೀಕ್ಷಿಸಿದ ಗ್ರಾಮಸ್ಥರು ಕುಟುಂಬಕ್ಕೆ ಮಾಹಿತಿ ನೀಡಿದ್ದರು. ಕುಟುಂಬಸ್ಥರೆಲ್ಲರೂ ಚಿತಾಗಾರಕ್ಕೆ ಬರುವಷ್ಟರಲ್ಲಿ ತಡವಾಗಿತ್ತು. 21 ವರ್ಷದ ಕರಣ್ ಕುಟುಂಬಸ್ಥರು ಬರುವ ಮೊದಲೇ ಬಹುತೇಕ ಬೆಂಕಿಗೆ ಅಹುತಿಯಾಗಿದ್ದ. ಈತನನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆಯೆ ಕೊನೆಯುಸಿರೆಳೆದಿದ್ದಾನೆ ಎಂದು ಗ್ರಾಮದ ಸರಪಂಚ್ ಭರತ್ ಸಿಂಗ್ ಘೋಸಿ ಹೇಳಿದ್ದಾರೆ.
ಭಾನುವಾರ ಬೆಳಿಗ್ಗೆ ಯುವಕ ಕರಣ್ ಅಂತ್ಯಕ್ರಿಯೆಯನ್ನು ಸೋದರ ಸಂಬಂಧಿ ಜ್ಯೋತಿಯವರ ಪಕ್ಕದಲ್ಲಿಯೇ ಮಾಡಲಾಗಿದೆ.
ಪೊಲೀಸ್ ತನಿಖೆಯ ನಂತರವೇ ಪೂರ್ಣ ವಿಷಯ ತಿಳಿದುಬರಲಿದೆ ಎಂದು ಬಹೇರಿಯಾ ಪೊಲೀಸ್ ಸ್ಟೇಷನ್ ಇನ್ಚಾರ್ಜ್ ಪೊಲೀಸ್ ಅಧಿಕಾರಿ ದಿವ್ಯಾ ಪ್ರಕಾಶ ತ್ರಿಪಾಠಿ ಹೇಳಿದ್ದಾರೆ.