ಪ್ರಧಾನಿ ನರೇಂದ್ರ ಮೋದಿ ಸರ್ಕಾರ `ನಾಲ್ಕು ವರ್ಷಕ್ಕೆ ಸೀಮಿತಗೊಳಿಸಿ ಸೇನಾ ನೇಮಕಾತಿ ಮಾಡುವ ಅಗ್ನಿಪಥ ಯೋಜನೆ’ಗೆ ಬಿಹಾರದಲ್ಲಿ ವ್ಯಾಪಕ ವಿರೋಧ ವ್ಯಕ್ತ ಆಗಿದೆ. ಬಿಜೆಪಿ-ಜೆಡಿಯು ಸಮ್ಮಿಶ್ರ ಸರ್ಕಾರ ಇರುವ ರಾಜ್ಯದಲ್ಲೇ ತೀವ್ರ ಪ್ರತಿಭಟನೆ ನಡೆಯುತ್ತಿದ್ದು, ಲಕ್ಷಾಂತರ ಸಂಖ್ಯೆಯಲ್ಲಿ ಯುವಕರು ಬೀದಿಗಿಳಿದಿದ್ದಾರೆ.
ರೈಲ್ವೆ ನಿಲ್ದಾಣದಲ್ಲಿ ಉದ್ರಿಕ್ತ ಯುವಕರ ಗುಂಪು ನಡೆಸುತ್ತಿದ್ದ ಪ್ರತಿಭಟನೆ ಹಿಂಸಾ ರೂಪ ತಾಳಿದೆ. ರೈಲ್ವೆ ನಿಲ್ದಾಣಕ್ಕೆ ನುಗ್ಗಿದ ಪ್ರತಿಭಟನಕಾರರು ರೈಲ್ವೆ ಹಳಿ ಮೇಲೆ ಸಿಕ್ಕಸಿಕ್ಕ ವಸ್ತುಗಳನ್ನು ಎಸೆದಿದ್ದಾರೆ. ವಸ್ತುಗಳಿಗೆ ಬೆಂಕಿ ಹಚ್ಚಿದ್ದಾರೆ. ಕಲ್ಲು ತೂರಾಟ ನಡೆಸಿದ್ದಾರೆ. ಪೊಲೀಸರು ಯುವಕರನ್ನು ಚದುರಿಸಲು ಅಶ್ರುವಾಯು ಪ್ರಯೋಗಿಸಿದ್ದಾರೆ.
ಜೆಹಾನಾಬಾದ್ನಲ್ಲಿ ಪೊಲೀಸರು ಮತ್ತು ವಿದ್ಯಾರ್ಥಿಗಳ ನಡುವೆ ಕಲ್ಲು ತೂರಾಟ ನಡೆದಿದೆ. ರೈಲ್ವೆ ಹಳಿಗಳಲ್ಲಿ ನಿಂತು ಪ್ರತಿಭಟನೆ ನಡೆಸುತ್ತಿದ್ದಾರೆ. ನವಾಡಾದಲ್ಲೂ ರೈಲುಗಳಿಗೆ ತಡೆಯೊಡ್ಡಲಾಗಿದೆ. ಪ್ರಧಾನಿ ಮೋದಿ ವಿರುದ್ಧ ಘೋಷಣೆ ಕೂಗಲಾಗಿದೆ.
ನಾಲ್ಕು ವರ್ಷಕ್ಕೆ ಸೀಮಿತವಾಗಿ (ಕೇವಲ ಶೇಕಡಾ 25ರಷ್ಟು ಮಂದಿಗೆ ಮಾತ್ರ ನಾಲ್ಕು ವರ್ಷದ ಬಳಿಕ ಸೇನೆಯಲ್ಲಿ ಮುಂದುವರಿಯಲು ಅವಕಾಶ) ನೇಮಕಾತಿ ಮಾಡುವ ಯೋಜನೆಯನ್ನು ಕೈಬಿಡಬೇಕು ಎಂದು ಸೇನೆ ಸೇರಲು ಸಿದ್ಧತೆ ಮಾಡಿಕೊಳ್ಳುತ್ತಿರುವ ಯುವಕರು ಆಗ್ರಹಿಸಿದ್ದಾರೆ.