ಸೇನಾ ನೇಮಕಾತಿ ಸಂಬಂಧ ಹೊಸದಾಗಿ ಜಾರಿಗೆ ತಂದಿರುವ ಅಗ್ನಿಪಥ ಯೋಜನೆಯನ್ನು ಹಿಂಪಡೆಯುವಂತೆ ಆಗ್ರಹಿಸಿ ಉತ್ತರ ಭಾರತ ಮತ್ತು ತೆಲಂಗಾಣದಲ್ಲಿ ನಡೆದ ಹಿಂಸಾತ್ಮಕ ಪ್ರತಿಭಟನೆ ಬೆನ್ನಲ್ಲೇ ಇವತ್ತು ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಸೇನಾರ್ಥಿಗಳನ್ನು ಸಮಾಧಾನಪಡಿಸುವ ಮತ್ತೊಂದು ನಿರ್ಧಾರ ಕೈಗೊಂಡಿದೆ.
ಕೇಂದ್ರ ಸಶಸ್ತ್ರ ಪೊಲೀಸ್ ಪಡೆಯಲ್ಲಿ (CAPF) ನೇಮಕಾತಿ ವೇಳೆ ಅಗ್ನಿಪಥ ಯೋಜನೆಯಡಿ 4 ವರ್ಷ ಸೇವೆ ಸಲ್ಲಿಸಿ ನಿವೃತ್ತರಾಗುವ ಸೈನಿಕರಿಗೆ ಶೇಕಡಾ 10ರಷ್ಟು ಮೀಸಲಾತಿಯನ್ನು ಪ್ರಕಟಿಸಿದೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಹೊಣೆಗಾರಿಕೆಯ ಕೇಂದ್ರ ಗೃಹ ಸಚಿವಾಲಯ ಇವತ್ತು ಮತ್ತಷ್ಟು ಸಡಿಲಿಕೆಯನ್ನು ಘೋಷಿಸಿದೆ.
ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳಾದ ಬಿಎಸ್ಎಫ್, ಸಿಆರ್ಪಿಎಫ್, ಐಟಿಬಿಪಿ, ಸಿಐಎಸ್ಎಫ್, ಎಸ್ಎಸ್ಬಿ, ಎನ್ಎಸ್ಜಿ ಮತ್ತು ಎಸ್ಎಸ್ಜಿ ನೇಮಕಾತಿಯಲ್ಲಿ ಶೇಕಡಾ 10ರಷ್ಟು ಮೀಸಲಾತಿ ನೀಡಲಾಗುತ್ತದೆ ಎಂದು ಕೇಂದ್ರ ಗೃಹ ಸಚಿವಾಲಯ ಹೇಳಿದೆ.
ಅಸ್ಸಾಂ ರೈಫಲ್ಸ್ ನೇಮಕಾತಿಯಲ್ಲೂ ಶೇಕಡಾ 10ರಷ್ಟು ಮೀಸಲಾತಿ ನೀಡಲಾಗುತ್ತದೆ ಎಂದು ಗೃಹ ಸಚಿವಾಲಯ ಹೇಳಿದೆ.
ಅಲ್ಲದೇ, ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆಯಲ್ಲಿ ಅಗ್ನಿಪಥ ಯೋಜನೆಯಡಿ 4 ವರ್ಷ ಸೇವೆ ಸಲ್ಲಿಸಿ ನಿವೃತ್ತರಾಗುವವರಿಗೆ ಈಗಿರುವ ಗರಿಷ್ಠ ವಯೋಮಿತಿಗಿಂತ ಮೂರು ವರ್ಷ ಹೆಚ್ಚುವರಿ ವಿನಾಯಿತಿ ನೀಡಲಾಗುತ್ತದೆ. ಅಗ್ನಿವೀರರ ಮೊದಲ ಬ್ಯಾಚ್ಗೆ ಈ ವಯೋಮಿತಿ ಸಡಿಲಿಕೆ 5 ವರ್ಷ ಇರಲಿದೆ ಎಂದು ಗೃಹ ಸಚಿವಾಲಯ ಹೇಳಿದೆ.
ನಿನ್ನೆಯಷ್ಟೇ ಕೇಂದ್ರ ಸರ್ಕಾರ ಅಗ್ನಿಪಥ ಯೋಜನೆಗೆ ಪ್ರವೇಶಾತಿ ವಯೋಮಿತಿಯನ್ನು ಮೊದಲ ಬ್ಯಾಚ್ಗೆ 21ರಿಂದ 23ಕ್ಕೆ ಹೆಚ್ಚಳ ಮಾಡಿತ್ತು.