ಪತ್ರಿಪಕ್ಷಗಳ ರಾಷ್ಟ್ರಪತಿ ಅಭ್ಯರ್ಥಿ ಆಯ್ಕೆ ಸಭೆಗೆ ಕೆಲವು ತಾಸುಗಳ ಮೊದಲೇ, ತೃಣಮೂಲ ಕಾಂಗ್ರೆಸ್ ಪಕ್ಷ(ಟಿಎಂಸಿ)ದ ಉಪಾಧ್ಯಕ್ಷರಾಗಿರುವ ಯಶವಂತ್ ಸಿನ್ಹಾ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಆ ಮೂಲಕ ರಾಷ್ಟ್ರಪತಿ ಚುನಾವಣೆಗೆ ವಿರೋಧ ಪಕ್ಷಗಳ ಅಭ್ಯರ್ಥಿಯಾಗಿ ಯಶ್ವಂತ್ ಸಿನ್ಹಾ ಅವರ ಆಯ್ಕೆ ಬಹುತೇಕ ಖಚಿತವಾದಂತಾಗಿದೆ.
ಯಶವಂತ್ ಸಿನ್ಹಾ ಅವರು ಟಿಎಂಸಿ ಪಕ್ಷದ ಎಲ್ಲಾ ಸ್ಥಾನಗಳಿಗೆ ರಾಜೀನಾಮೆ ನೀಡಿ ಸಾಮಾನ್ಯ ವ್ಯಕ್ತಿಯಾಗಿದ್ದಾರೆ (ರಾಷ್ಟ್ರಪತಿ ಅಭ್ಯರ್ಥಿ ಯಾವುದೇ ಪಕ್ಷದ ಸದಸ್ಯನಾಗಿರಬಾರದು).
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಮಮತಾ ಬ್ಯಾನರ್ಜಿಯವರಿಗೆ ನಾನು ಅಭಾರಿಯಾಗಿದ್ದೇನೆ. ವಿರೋಧ ಪಕ್ಷಗಳ ಒಗ್ಗಟ್ಟಿಗಾಗಿ, ರಾಷ್ಟ್ರೀಯ ಉದ್ದೇಶಕ್ಕಾಗಿ ಪಕ್ಷದಿಂದ ದೂರ ಸರಿಯುತ್ತಿದ್ದೇನೆ ಎಂದು ಹೇಳಿದ್ದಾರೆ.
ಸೋಮವಾರವಷ್ಟೇ ವಿರೋಧ ಪಕ್ಷಗಳ ರಾಷ್ಟ್ರಪತಿ ಅಭ್ಯರ್ಥಿ ಆಯ್ಕೆಯಿಂದ ಮಹಾತ್ಮ ಗಾಂಧಿಯವರ ಮೊಮ್ಮಗ ಗೋಪಾಲಕೃಷ್ಣ ಗಾಂಧಿಯವರು ಹಿಂದೆ ಸರಿದಿದ್ದರು. ಇದಕ್ಕಿಂತ ಮೊದಲು ಶರದ್ ಪವಾರ್ ಹಾಗೂ ಫಾರುಕ್ ಅಬ್ದುಲ್ಲಾ ಅವರು ವಿರೋಧ ಪಕ್ಷಗಳ ಒಕ್ಕೂಟದ ರಾಷ್ಟ್ರಪತಿ ಅಭ್ಯರ್ಥಿ ಆಯ್ಕೆಯಿಂದ ಹಿಂದೆ ಸರಿದಿದ್ದರು.