ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ದಿನೇ ದಿನೇ ಅಪ್ರಾಪ್ತ ಯುವತಿಯರು ಮತ್ತು ಮಹಿಳೆಯರ ಮೇಲಿನ ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅಲ್ಲಿನ ಸ್ಥಳೀಯ ಸರ್ಕಾರ ‘ತುರ್ತು ಪರಿಸ್ಥಿತಿ’ ಘೋಷಣೆ ಮಾಡಿದೆ.
ಈ ಬಗ್ಗೆ ಇಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಪಂಜಾಬ್ ಗೃಹ ಸಚಿವ ಅತ್ತ ತಾರಾಹ್ ಅವರು ಮಾತನಾಡಿದ್ದು, ಅತ್ಯಾಚಾರದ ಪ್ರಕರಣಗಳು ಹೆಚ್ಚುತ್ತಿರುವುದು ಸಮಾಜ ಹಾಗೂ ಸರ್ಕಾರಕ್ಕೆ ಕಠಿಣ ಸಮಸ್ಯೆ.
ಪಂಜಾಬ್ನಲ್ಲಿ ದಿನಂಪ್ರತಿ 4 ರಿಂದ 5 ಪ್ರಕರಣಗಳು ಹೆಚ್ಚುತ್ತಿವೆ. ಆದ್ದರಿಂದ ಅತ್ಯಾಚಾರ ಪ್ರಕರಣಗಳು, ದೌರ್ಜನ್ಯ ಪ್ರಕರಣಗಳನ್ನು ನಿಯಂತ್ರಿಸಲು ಈ ತುರ್ತು ಪರಿಸ್ಥಿತಿ ಜಾರಿ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ.
ಪೋಷಕರು ತಮ್ಮ ಮಕ್ಕಳನ್ನು ರಕ್ಷಿಸಿಕೊಳ್ಳುವ ಬಗ್ಗೆ ಚಿಂತಿಸಬೇಕು. ಅತ್ಯಾಚಾರ ಪ್ರಕರಣಗಳನ್ನು ನಿಯಂತ್ರಿಸಲು ಆರೋಪಿಗಳಿಂದ ಡಿಎನ್ಎ ಮಾದರಿ ಸಂಗ್ರಹಿಸಿಕೊಳ್ಳಲಾಗುವುದು. ತುರ್ತು ಪರಿಸ್ಥಿತಿಯನ್ನು ಎರಡು ವಾರಗಳ ಕಾಲ ಹೇರಲಾಗಿದೆ. ಅತ್ಯಾಚಾರ ಪ್ರಕರಣಗಳು ನಿಯಂತ್ರಣಕ್ಕೆ ಬಂದ ತಕ್ಷಣ ತುರ್ತುಪರಿಸ್ಥಿತಿಯನ್ನು ಹಿಂತೆಗೆದುಕೊಳ್ಳಲಾಗುವುದು ಎಂದು ಗೃಹ ಸಚಿವರು ಹೇಳಿದ್ದಾರೆ.
ಪಾಕಿಸ್ತಾನ ಲಿಂಗ ಅಸಮಾನತೆಯಿಂದ ಬಳಲುತ್ತಿದೆ. ದೇಶಾದಾದ್ಯಂತ ಮಹಿಳೆಯರ ಮೇಲೆ ದೌರ್ಜನ್ಯಗಳು ನಡೆಯುತ್ತಿವೆ. 2021 ರ ವಿಶ್ವ ಲಿಂಗ ಸಮಾನತೆ ವರದಿಯಲ್ಲಿ ಪಾಕಿಸ್ತಾನ 156 ರಲ್ಲಿ 153 ನೇ ಸ್ಥಾನ ಪಡೆದುಕೊಂಡಿದೆ. ಇರಾಕ್, ಯೆಮೆನ್ ಹಾಗೂ ಅಫ್ಘಾನಿಸ್ತಾನದ ನಂತರದ ಸ್ಥಾನ ಪಾಕಿಸ್ತಾನದ್ದಾಗಿದೆ.
ಕಳೆದ ನಾಲ್ಕು ವರ್ಷದಿಂದ ಪಾಕಿಸ್ತಾನದಲ್ಲಿ ಪ್ರತಿ ವರ್ಷ 14,456 ರಂತೆ ಮಹಿಳೆಯರ ಮೇಲಿನ ಅತ್ಯಾಚಾರ ಪ್ರಕರಣಗಳು ವರದಿಯಾಗುತ್ತಿವೆ.
ಪಾಕಿಸ್ತಾನದಲ್ಲಿ ಕೆಲಸದ ಸ್ಥಳದಲ್ಲಿ ಮಹಿಳೆಯರ ಮೇಳಿನ ಅತ್ಯಾಚಾರದ ಪ್ರಕರಣಗಳು ಹೆಚ್ಚುತ್ತಿವೆ. 2018 ರಲ್ಲಿ 5,048 , 2019 ರಲ್ಲಿ 4,751 , 2020 ರಲ್ಲಿ 4,276 , 2021 ರಲ್ಲಿ 2,078 ಅತ್ಯಾಚಾರ ಪ್ರಕರಣಗಳು ಕೆಲಸದ ಸ್ಥಳದಲ್ಲಿ ವರದಿಯಾಗಿವೆ.