ತ್ರಿಪುರ ವಿಧಾನಸಭೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಹೊಸದಾಗಿ ಸಿಎಂ ಆದ ಡಾ ಮಾಣಿಕ್ ಸಾಹಾ ಅವರು ಗೆಲುವು ಸಾಧಿಸಿದ್ದಾರೆ.
4 ವಿಧಾನಸಭಾ ಕ್ಷೇತ್ರಗಳ ಪೈಕಿ ಬಿಜೆಪಿ ಮೂರು ಮತ್ತು ಕಾಂಗ್ರೆಸ್ 1ರಲ್ಲಿ ಗೆಲುವು ಸಾಧಿಸಿದೆ. ಈ ಮೂಲಕ 1 ಕ್ಷೇತ್ರದಲ್ಲಿ ಲಾಭ ಗಳಿಸಿದೆ.
ಟೌನ್ ಬೋರ್ಡೋವಾಲಿ ಕ್ಷೇತ್ರದಿಂದ ಸಿಎಂ ಡಾ ಸಾಹಾ ಅವರು 4,603 ಮತಗಳಿಂದ ಗೆಲುವು ಸಾಧಿಸಿದ್ದಾರೆ. ಇದೇ ಮೇನಲ್ಲಿ ಸಿಎಂ ಸ್ಥಾನದಿಂದ ಬಿಪ್ಲಬ್ ದೇಬ್ ಅವರನ್ನು ಕೆಳಗಿಳಿಸಿ ಬಿಜೆಪಿ ಹೈಕಮಾಂಡ್ ಸಾಹಾ ಅವರನ್ನು ಸಿಎಂ ಮಾಡಿತ್ತು.
ಸುಮಾ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ 3,278 ಮತಗಳಿಂದ ಗೆದ್ದಿದೆ.
ಜುಬ್ರಾಜ್ ನಗರ ವಿಧಾಸಸಭಾ ಕ್ಷೇತ್ರದಲ್ಲಿ ಬಿಜೆಪಿ 4,572 ಮತಗಳಿಂದ ಗೆದ್ದಿದೆ. ಈ ಕ್ಷೇತ್ರದಲ್ಲಿ ಕಾಂಗ್ರೆಸ್ 1,440 ಮತಗಳೊಂದಿಗೆ ಮೂರನೇ ಸ್ಥಾನಕ್ಕೆ ಕುಸಿದಿದೆ.
ರಾಜಧಾನಿ ಅಗರ್ತಲಾ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ 3,163 ಮತಗಳಿಂದ ಗೆದ್ದಿದೆ. ಬಿಜೆಪಿ ಎರಡನೇ ಸ್ಥಾನದಲ್ಲಿದ್ದು, ಸಿಪಿಐಎಂ ಮೂರನೇ ಸ್ಥಾನದಲ್ಲಿದೆ.
ಮುಂದಿನ ವರ್ಷದ ಮಾರ್ಚ್ ವೇಳೆ ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಬಿಜೆಪಿಗೆ ಇದು ಸಿಹಿ ಸುದ್ದಿ. ಸಿಎಂ ಬದಲಾವಣೆಯ ಬಳಿಕವೂ ಮೂರು ಕ್ಷೇತ್ರಗಳಲ್ಲಿ ಗೆದ್ದಿರುವುದು ನಾಯಕತ್ವ ಬದಲಾವಣೆಯನ್ನು ರಾಜ್ಯದ ಜನತೆ ಒಪ್ಪಿಕೊಂಡಿದ್ದಾರೆ ಎಂಬ ಸಂದೇಶ ರವಾನಿಸಿದೆ.
ಅಗರ್ತಲಾದಲ್ಲಿ 2018ರ ಚುನಾವಣೆಯಲ್ಲಿ ಸಿಪಿಐಎಂ ಗೆದ್ದಿತ್ತು. ಆದರೆ ಈ ಬಾರಿ ಕಾಂಗ್ರೆಸ್ ಗೆದ್ದು ನೆಮ್ಮದಿಯ ನಿಟ್ಟುಸಿರುವ ಬಿಟ್ಟಿದೆ. ಕ್ಷೇತ್ರ ಕಳೆದುಕೊಂಡಿರುವ ಸಿಪಿಐಎಂ ಮೂರನೇ ಸ್ಥಾನಕ್ಕೆ ಕುಸಿದಿದೆ.