ಬಿಜೆಪಿ ನೇತೃತ್ವದ ಎನ್ಡಿಎಯ ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮು ಅವರ ಗ್ರಾಮ ಉಪರ್ಬೇಡಾಗೆ ಒಡಿಶಾ ಸರ್ಕಾರ ಶನಿವಾರ ವಿದ್ಯುತ್ ಸಂಪರ್ಕ ಕಲ್ಪಿಸುವ ಕೆಲಸ ಆರಂಭಿಸಿದೆ. ದ್ರೌಪದಿ ಮುರ್ಮು ಅವರು ರಾಷ್ಟ್ರಪತಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಆ ಮೂಲಕ ಅವರ ಸ್ವಂತ ಗ್ರಾಮ ಕೊನೆಗೂ ಕತ್ತಲಿನಿಂದ ಹೊರಬಂದಿದ್ದು, ಬೆಳಕು ಕಂಡಿದೆ.
ದ್ರೌಪದಿ ಮುರ್ಮು ಅವರು ರಾಷ್ಟ್ರಪತಿ ಅಭ್ಯರ್ಥಿ ಸ್ಥಾನಕ್ಕೆ ಅರ್ಜಿ ಸಲ್ಲಿಸಿದ ಮರುದಿನ ಒಡಿಶಾ ಸರ್ಕಾರ ಮಯೂರ್ಬಂಜ್ ಜಿಲ್ಲೆಯ ಉಪರ್ಬೇಡಾ ಗ್ರಾಮಕ್ಕೆ ವಿದ್ಯುತ್ ಕಲ್ಪಿಸುವ ಕೆಲಸ ಆರಂಭಿಸಿದೆ. ಸ್ವತಂತ್ರ ಬಂದ ನಂತರ ಇದುವರೆಗೂ ಕತ್ತಲಲ್ಲಿದ್ದ ಗ್ರಾಮ ಇದೀಗ ಬೆಳಕು ಕಂಡಿದೆ.
ದ್ರೌಪದಿ ಮುರ್ಮು ಅವರು ಪ್ರಸ್ತುತ ಈ ಗ್ರಾಮದಲ್ಲಿ ವಾಸಮಾಡುತ್ತಿಲ್ಲ. ಉಪರ್ಬೇಡಾದಿಂದ 20 ಕಿ.ಮೀಟರ್ ದೂರದಲ್ಲಿರುವ ಮುನ್ಸಿಪಲ್ ನಗರ ರೈರಾಂಗ್ಪುರಕ್ಕೆ ತೆರಳಿ ವಾಸಮಾಡುತ್ತಿದ್ದಾರೆ. ದ್ರೌಪದಿ ಮುರ್ಮು ಅವರು ಒಡಿಶಾ ವಿಧಾನಸಭೆಯಲ್ಲಿ ಸಚಿವರಾಗಿ, ಬಿಜೆಪಿ ರಾಷ್ಟ್ರೀಯ ಎಸ್ಟಿ ಮೋರ್ಚಾದ ಉಪಾಧ್ಯಕ್ಷರಾಗಿ ಹಾಗೂ ಜಾರ್ಖಾಂಡ್ ರಾಜ್ಯದ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ್ದಾರೆ. ಆದಾಗ್ಯೂ ಇವರು ತಮ್ಮ ಸ್ವಂತ ಗ್ರಾಮಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿರಲಿಲ್ಲ.
ಉಪರ್ಬೇಟಾ ಗ್ರಾಮಕ್ಕೆ ಮುಂದಿನ 24 ಗಂಟೆಗಳಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸಲಾಗುವುದು ಎಂದು ವಿದ್ಯುತ್ ಇಲಾಖೆಯ ಹಿರಿಯ ಅಧಿಕಾರಿ ಹೇಳಿದ್ದಾರೆ.
ಈ ಗ್ರಾಮವು 3,500 ಜನರನ್ನು ಒಳಗೊಂಡಿದೆ. ದ್ರೌಪದಿ ಮುರ್ಮು ಅವರು ರಾಷ್ಟ್ರಪತಿ ಅಭ್ಯರ್ಥಿಯಾಗಿ ಆಯ್ಕೆಯಾದ ನಂತರ ಪತ್ರಕರ್ತರು ಅವರ ಗ್ರಾಮಕ್ಕೆ ಬೇಟಿ ನೀಡಿದಾಗ ಉಪರ್ಬೇಡಾ ಕತ್ತಲಲ್ಲಿರುವ ವಿಷಯ ಬೆಳಕಿಗೆ ಬಂದಿದೆ. ಈ ಬಗ್ಗೆ ಅಧಿಕಾರಿಗಳಲ್ಲಿ ವಿಚಾರಿಸಿದಾಗ ಈ ಗ್ರಾಮಕ್ಕೆ ವಿದ್ಯುತ್ ನೀಡಬಾರದು ಎಂಬ ಉದ್ದೇಶವಿರಲಿಲ್ಲ. ಅದರೆ, ವಿವಿಧ ಕಾರಣಗಳಿಂದ ಅನುಮತಿ ದೊರಕಿರಲಿಲ್ಲ ಎಂದು ಹೇಳಿದ್ದಾರೆ.
ಹಬ್ಬ ಹರಿದಿನಗಳಲ್ಲಿ ಮುರ್ಮು ಗ್ರಾಮಕ್ಕೆ ಭೇಟಿ ನೀಡಿದಾಗ ಅವರ ಗಮನಕ್ಕೆ ತರಲಾಗಿತ್ತು. ಅಲ್ಲದೇ, 2019 ರ ಚುನಾವಣೆಯ ಸಮಯದಲ್ಲಿ ಸ್ಥಳೀಯ ಶಾಸಕ ಮತ್ತು ಸಂಸದರಿಗೆ ವಿಷಯ ತಿಳಿಸಲಾಗಿದೆ. ಆದಾಗ್ಯೂ ಯಾವ ಕೆಲಸವೂ ಆಗಿಲ್ಲ ಎಂದು ಉಪರಬೇಡ ಗ್ರಾಮದ ನಿವಾಸಿ ಚಿತ್ತರಂಜನ್ ಬಸ್ಕೆ ಹೇಳಿದ್ದಾರೆ.
ಉಪರ್ರ್ಬೇಡಾ ಗ್ರಾಮಸ್ಥರು ಇದುವರೆಗೂ ಸೀಮೆಎಣ್ಣೆ ದೀಪದಿಂದಲೇ ಪೂರ್ತಿ ರಾತ್ರಿಯನ್ನು ಕಳೆಯುತ್ತಿದ್ದರು.
ಉಪರ್ರ್ಬೇಡಾ ಗ್ರಾಮದಲ್ಲಿ ಒಡಿಶಾ ಸಂಸದರಾದ ಸಲ್ಕಾಮ್ ಮುರ್ಮು, ಭಬೇಂದ್ರ ಮಜೀ ಮತ್ತು ಮಾಜಿ ಮಂತ್ರಿ ಕಾರ್ತಿಕ್ ಮಜೀ ಇವರು ಇದೇ ಗ್ರಾಮದಲ್ಲಿ ಜನಿಸಿದ್ದಾರೆ. ಒಡಿಶಾದ ಮಯೂರ್ಬಂಜ್ ಜಿಲ್ಲೆಯಲ್ಲಿ ಇದುವರೆಗೂ 500 ಗ್ರಾಮಗಳಿಗೆ ಸರಿಯಾದ ರಸ್ತೆಗಳಿಲ್ಲ, 1350 ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ಇಲ್ಲ ಎಂದು ತಿಳಿದುಬಂದಿದೆ.