ಕೊಡಗು ಜಿಲ್ಲೆಯ ಹಲವೆಡೆ ಶುಕ್ರವಾರ ನಸುಕಿನಲ್ಲಿ ಭೂಕಂಪನ ಸಂಭವಿಸಿದೆ. ಈ ಭೂಕಂಪನದ ಕೇಂದ್ರ ಬಿಂದು ಮಡಿಕೇರಿ ತಾಲ್ಲೂಕಿನಲ್ಲಿ ಪತ್ತೆಯಾಗಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ಉಸ್ತುವಾರಿ ಕೇಂದ್ರ ದೃಢಪಡಿಸಿದೆ.
ಕೊಡಗು ಜಿಲ್ಲೆಯಲ್ಲಿ ಈ ವಾರದಲ್ಲಿ ಇದು 3 ನೇ ಭೂಕಂಪನದ ಪ್ರಕರಣವಾಗಿದೆ. ಕೆಲವು ತಿಂಗಳುಗಳಿಂದ ಜಿಲ್ಲೆಯಾದ್ಯಂತ ಜನರು ಭೂಕಂಪನದ ಅನುಭವಕ್ಕೀಡಾಗುತ್ತಿದ್ದಾರೆ.
ಮಡಿಕೇರಿ ತಾಲ್ಲೂಕಿನ ಚೆಂಬು ಗ್ರಾಮದಿಂದ ವಾಯುವ್ಯ ದಿಕ್ಕಿನಲ್ಲಿ 5.2 ಕಿ.ಮೀ ದೂರದಲ್ಲಿ ಭೂಮಿಯ 10 ಕಿ.ಮೀ. ಆಳದಲ್ಲಿ ನಸುಕಿನ 1.15ರಲ್ಲಿ 1.8 ತೀವ್ರತೆಯ ಭೂಕಂಪ ಭೂಕಂಪ ಸಂಭವಿಸಿದೆ. ಇದರಿಂದ ಕೆಲವು ಸೆಕೆಂಡ್ ಗಳ ಕಾಲ ಭೂಮಿ ಕಂಪಿಸಿದ ಅನುಭವ ಸುಮಾರು 30 ಕಿ.ಮೀ ವ್ಯಾಪ್ತಿಯಲ್ಲಿರುವ ಜನರಿಗೆ ಉಂಟಾಗಿದೆ. ಯಾವುದೇ ಹಾನಿಯಾಗಿಲ್ಲ ಎಂದು ಕೇಂದ್ರದ ಪ್ರಕಟಣೆ ತಿಳಿಸಿದೆ.
ದಿನೇ ದಿನೇ ಕೊಡಗಿನಲ್ಲಿ ಭೂಕಂಪನದ ಪ್ರಕರಣಗಳು ವರದಿಯಾಗುತ್ತಲೇ ಇವೆ. ಈ ಘಟನೆಗಳಿಂದ ಕೊಡಗಿನ ಜನ ಆತಂಕದಲ್ಲಿದ್ದಾರೆ.