ಗರ್ಭಪಾತ ಮಾತ್ರೆ ಸೇವಿಸಿ 15 ವರ್ಷದ ಬಾಲಕಿಯೊಬ್ಬಳು ಸಾವನ್ನಪ್ಪಿರುವ ಘಟನೆ ತಮಿಳುನಾಡಿನ ತಿರುವಣ್ಣಾಮಲೈ ಜಿಲ್ಲೆಯ ಚೆಂಗಂನಲ್ಲಿ ನಡೆದಿದೆ.
ಮೃತ ಬಾಲಕಿ ಮುರುಗನ್ ಎಂಬಾತನಿಂದ ಗರ್ಭ ಧರಿಸಿದ್ದಳು. ಬಾಲಕಿಯನ್ನು ಪ್ರತಿನಿತ್ಯ ಮುರುಗನ್ ಶಾಲೆಗೆ ಡ್ರಾಪ್ ಮಾಡುತ್ತಿದ್ದ. ಈ ವೇಳೆ ಇಬ್ಬರ ನಡುವೆ ಸಂಬಂಧ ಬೆಳೆದಿದೆ. ಇತ್ತೀಚೆಗಷ್ಟೇ ಬಾಲಕಿ ಗರ್ಭಿಣಿಯಾಗಿದ್ದು, ಈ ವಿಚಾರವನ್ನು ಮುರುಗನ್ಗೆ ತಿಳಿಸಿದ್ದಾಳೆ. ನಂತರ ಮುರುಗನ್ ಸ್ನೇಹಿತ ಪ್ರಭು(27) ಗರ್ಭಪಾತ ಮಾತ್ರೆ ಸೇವಿಸುವಂತೆ ಸಲಹೆ ನೀಡಿದ್ದನು. ಶಾಲೆಗೆ ಕರೆದುಕೊಂಡು ಹೋಗುವ ನೆಪದಲ್ಲಿ ಬಾಲಕಿಯನ್ನು ಆಕೆಯ ಮನೆಯಿಂದ ಕರೆತಂದು ದಾರಿ ಮಧ್ಯೆ ಗರ್ಭಪಾತದ ಮಾತ್ರೆ ನುಂಗಿಸಿದ್ದಾನೆ.
ಇಬ್ಬರು ಬಾಲಕಿಯರೊಂದಿಗೆ ಶಾಲೆಯೊಳಗೆ ಹೋಗುವಾಗ, ಬಾಲಕಿ ಇದ್ದಕ್ಕಿದ್ದಂತೆ ಪ್ರಜ್ಞೆ ತಪ್ಪಿ ಕೆಳಗೆ ಬಿದ್ದಿದ್ದಾಳೆ. ಕೂಡಲೇ ಮುರುಗನ್ ಬಾಲಕಿಯನ್ನು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದಾನೆ. ವೈದ್ಯರು ಬಾಲಕಿ ಸಾವನ್ನಪ್ಪಿದ್ದಾಳೆ ಎಂದು ತಿಳಿಸಿದ್ದಾರೆ. ನಂತರ ಬಾಲಕಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ತಿರುವನಮಲೈ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.
ಇದೀಗ, ಬಾಲಕಿಯ ತಂದೆ ನೀಡಿದ ದೂರಿನ ಆಧಾರದ ಮೇಲೆ ಮುರುಗನ್ ಅನ್ನು ಬಂಧಿಸಿದ್ದಾರೆ. ಅಲ್ಲದೇ ಮುರುಗನ್ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದ್ದು, ಗರ್ಭಪಾತದ ಮಾತ್ರೆ ನೀಡಿದ ವ್ಯಕ್ತಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.