ಶಾಸಕ ರಮೇಶ್ ಕುಮಾರ್ ಶಕುನಿ ಇದ್ದಂತೆ. ಶೀಘ್ರವೇ ಮಹಾಭಾರತ ಯುದ್ಧ ನಡೆಯಲಿದ್ದು ಶಕುನಿ, ದುರ್ಯೋಧನ ಹತರಾಗಲಿದ್ದಾರೆ ಎಂದು ಕೋಲಾರ ಕಾಂಗ್ರೆಸ್ ನಾಯಕ ಹಾಗೂ ಮಾಜಿ ಸಂಸದ ಕೆ.ಎಚ್.ಮುನಿಯಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೆಎಚ್.ಮುನಿಯಪ್ಪ ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರುತ್ತಾರೆ ಎನ್ನುವ ಸುದ್ದಿ ಜಿಲ್ಲೆಯಾದ್ಯಂತ ಹರಿದಾಡುತ್ತಿದೆ.ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಕಾಂಗ್ರೆಸ್ ಬಿಟ್ಟು ಯಾವ ಪಕ್ಷಕ್ಕೆ ಸೇರುವುದಿಲ್ಲ ಎಂದು ಸ್ಪಷ್ಟನೆ ನೀಡಿದರು.
ಇದೇ ವೇಳೆ ಮುಂದುವರೆದು ಮಾತನಾಡಿದ ಅವರು, ಕೋಲಾರ ಕಾಂಗ್ರೆಸ್ ಹಿರಿಯ ನಾಯಕ ಹಾಗೂ ಮಾಜಿ ಸಚಿವ ಕೆಆರ್ ರಮೇಶ್ ಕುಮಾರ್ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಅವರನ್ನು ಶಕುನಿಗೆ ಹೋಲಿಕೆ ಮಾಡಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಕೆಎಚ್ ಮುನಿಯಪ್ಪನವರು, ನಾನು ಸೋತ ಕಾರಣಕ್ಕೆ ನನ್ನನ್ನು ಜಿಲ್ಲೆಯಲ್ಲಿ ನಿರ್ಲಕ್ಷ್ಯ ಮಾಡುತ್ತಿದ್ದಾರೆ. ರಮೇಶ್ ಕುಮಾರ್ ಕಾಂಗ್ರೆಸ್ ಪಕ್ಷದಲ್ಲಿ ನಾವಿರಬೇಕಾ ಅಥವಾ ಕೆ.ಎಚ್.ಮುನಿಯಪ್ಪ ಇರಬೇಕಾ ಅಂತಾ ಕೇಳುತ್ತಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಶಕುನಿ ಪಾತ್ರ ಮಾಡುತ್ತಿರುವ ರಮೇಶ್ ಕುಮಾರ್ ಗೆ ಮುಂದೆ ಉತ್ತರ ಸಿಗಲಿದೆ. ಇವರು ಜಿಲ್ಲೆಯ ಎಲ್ಲಾ ಶಾಸಕರಿಗೆ ಮಾಟ- ಮಂತ್ರ ಮಾಡಿಸಿದ್ದಾರೆ. ಜಿಲ್ಲೆಯಲ್ಲಿ ಯಾರನ್ನೂ ಮಂತ್ರಿ ಮಾಡಬಾರದೆಂದು ಶಕುನಿ ತಂತ್ರ ಹೂಡಿದ್ದಾರೆ.
ಪಾಂಡವರ ವನವಾಸ ಮುಗಿದಿದೆ. ಮಹಾಭಾರತಯುದ್ದ ಶೀಘ್ರವೇ ಆರಂಭವಾಗಲಿದೆ ಶಕುನಿ, ದುರ್ಯೋಧನ, ಎಲ್ಲರೂ ಹತವಾಗಲಿದ್ದಾರೆ. ಏಕಪಾತ್ರಭಿನಯ ಮಾಡುತ್ತಿರುವ ರಮೇಶ್ ಕುಮಾರ್ ಗೆ ಶೀಘ್ರವೇ ಜನ ಉತ್ತರ ಕೊಡಲಿದ್ದಾರೆ. ರಮೇಶ್ ಕುಮಾರ್ ಮಾತಿಗೆ ಎಲ್ಲರೂ ಮುರ್ಖರಾಗಿದ್ದಾರೆ.ಯುದ್ದದಲ್ಲಿ ಕೃಷ್ಣ ನ ಸಹಕಾರದಿಂದ ಪಾಂಡವರು ಗೆಲ್ಲಲಿದ್ದಾರೆ ಎಂದು ರಮೇಶ್ ಕುಮಾರ್ ವಿರುದ್ಧ ಹರಿಹಾಯ್ದರು.
ಸುಧಾಕರ ಮತ್ತು ಕೊತ್ತನೂರು ಮಂಜುನಾಥ್ ಲೋಕಸಭಾ ಚುನಾವಣೆಯಲ್ಲಿ ಯಾವ ರೀತಿ ನಡೆದುಕೊಂಡಿದ್ದರು ಎನ್ನುವ ಬಗ್ಗೆ ಜನರಿಗೆ ಗೊತ್ತು. ನನಗೆ ಹೇಳದೇ, ಅವರನ್ನು ಪಕ್ಷಕ್ಕೆ ಬರಮಾಡಿಕೊಂಡಿರುವ ಬಗ್ಗೆ ಜನರಿಗೆ ತಿಳಿಸಬೇಕು. ಇವರು ಕಾಂಗ್ರೆಸ್ಗೆ ಬರುವ ಬಗ್ಗೆ ನನ್ನ ವಿರೋಧವಿದೆ. ಒಂದು ತಿಂಗಳು ಕಾಲಾವಕಾಶ ಕೊಡುವೆ. ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಯಾವ ರೀತಿ ತೀರ್ಮಾನ ತೆಗೆದುಕೊಳ್ಳುತ್ತಾರೋ ಕಾದು ನೋಡುವೆ ಎಂದು ತಮ್ಮ ಅಸಮಾಧಾನದ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಹೇಳಿದ್ದಾರೆ.