ಆರಂಭದಿಂದಲೂ ತನ್ನ ಸಾಕಷ್ಟು ವಿಶೇಷತೆಗಳು, ಟೀಸರ್, ಟ್ರೈಲರ್ ಮೂಲಕ ಸಿನಿಪ್ರೇಮಿಗಳನ್ನು ಹೊಸದೊಂದು ಲೋಕಕ್ಕೆ ಕರೆದುಕೊಂಡು ಹೋಗುತ್ತಿರುವ ವಿಕ್ರಾಂತ್ ರೋಣ ಚಿತ್ರವು ಈಗ ಮತ್ತೊಂದು ಅಚ್ಚರಿಗೆ ಕಾರಣವಾಗಿದೆ.
ನೋಡುಗರ ಕಣ್ಮನ ತಣಿಸುವ ಜೋಗುಳ ಗೀತೆಯ ಲಿರಿಕಲ್ ವೀಡಿಯೋವನ್ನ ಹೊರತಂದಿದೆ. ಈ ಒಂದು ಹಾಡಿಗಾಗಿಯೇ ಕೋಟಿ ರೂಗಳ ವೆಚ್ಚದ ವಿಶೇಷ ಸೆಟ್ಟನ್ನು ನಿರ್ಮಾಪಕ ಜಾಕ್ ಮಂಜು ಅವರು ಹಾಕಿಸಿ, ಚಿತ್ರೀಕರಣ ನಡೆಸಿದ್ದಾರೆ. ಅಲ್ಲದೆ ಬಹಳ ದಿನಗಳ ನಂತರ ಕನ್ನಡದಲ್ಲಿ ಒಂದೊಳ್ಳೆ ಜೋಗುಳ ಗೀತೆಯನ್ನು ವಿಕ್ರಾಂತ್ ರೋಣ ಚಿತ್ರದ ಮೂಲಕ ಕನ್ನಡಿಗರು ಸವಿಯವಂತಾಗಿದೆ.
ನಾಯಕ ಸುದೀಪ್ ಅವರು ಬಹಳ ಇಷ್ಟಪಟ್ಟಂಥ ಗೀತೆಯೂ ಇದಾಗಿದ್ದು, ಇಲ್ಲಿ ಸುದೀಪ್ ಅವರು ಮಗುವೊಂದನ್ನು ರಮಿಸುತ್ತ ಹಾಡುವಾಗ ಬರುವ ಪದಗಳನ್ನ ಅಷ್ಟೆ ಅರ್ಥಗರ್ಭಿತವಾಗಿ ಅನೂಪ್ ಭಂಡಾರಿ ಅವರು ಮುತ್ತಿನ ಮಣಿಯಂತೆ ಜೋಡಿಸಿದ್ದಾರೆ. ಅದಕ್ಕೆ ತಕ್ಕಂತೆ ವಿಜಯಪ್ರಕಾಶ್ ಅವರು ನೀಡಿರುವ ಕಂಠ, ಅಜನೀಶ್ ಲೋಕನಾಥ್ ಸಂಯೋಜಿಸಿರುವ ಇಂಪಾದ ಸಂಗೀತ ಕೇಳುಗರನ್ನು ಮಂತ್ರ ಮುಗ್ಧರನ್ನಾಗಿಸುತ್ತದೆ. ಬಾಬಿ ಅವರೂ ಇಲ್ಲಿ ಮ್ಯೂಸಿಕ್ ಗೆ ಕೈಜೋಡಿಸಿದ್ದಾರೆ. ಕಥೆಯ ಹೃದಯಭಾಗದಂತಿರುವ ಈ ಹಾಡು ಅನ್ಯಭಾಷಿಗರೂ ಸಹ ತಲೆದೂಗುವಂತೆ ಮೋಡಿಮಾಡಿದೆ.
ಕಿಚ್ಚ ಸುದೀಪ್, ನಿರೂಪ್ ಭಂಡಾರಿ, ನೀತಾ ಅಶೋಕ್, ಬಾಲಿವುಡ್ ಬೆಡಗಿ ಜಾಕ್ವೆಲಿನ್ ಫರ್ನಾಂಡೀಸ್ ನಟಿಸಿರುವ ಈ ಚಿತ್ರ ಕನ್ನಡ,ಹಿಂದಿ, ತೆಲುಗು, ತಮಿಳು, ಮಲಯಾಳಂ ಸೇರಿದಂತೆ ಹಲವಾರು ಭಾಷೆಗಳಲ್ಲಿ ನಿರ್ಮಾಣವಾಗಿರುವ ವಿಕ್ರಾಂತ್ ರೋಣ ಜುಲೈ 28 ರಂದು ಗಲ್ಫ್ ರಾಷ್ಟ್ರಗಳಲ್ಲೂ ಸೇರಿದಂತೆ ಪ್ರಪಂಚದಾದ್ಯಂತ ಬಿಡುಗಡೆಯಾಗುತ್ತಿದೆ.
ಕಿಚ್ಚ ಕ್ರಿಯೇಶನ್ಸ್ ಹಾಗೂ ಜೀ ಸ್ಟುಡಿಯೋಸ್ ಅರ್ಪಿಸುವ ಈ ಚಿತ್ರವನ್ನು ಶಾಲಿನಿ ಆರ್ಟ್ಸ್ ಮೂಲಕ ಜಾಕ್ ಮಂಜು ಅವರು ಬಹುಕೋಟಿ ವೆಚ್ಚದಲ್ಲಿ ನಿರ್ಮಿಸಿದ್ದಾರೆ.