ಚೀನಾದ ಸ್ಮಾರ್ಟ್ಫೋನ್ ತಯಾರಿಕಾ ಕಂಪನಿ ವಿರುದ್ಧಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇಡಿ) ತನಿಖೆಯನ್ನು ತೀವ್ರಗೊಳಿಸಿದ ಬೆನ್ನಲ್ಲೇ ವಿವೋ ನಿರ್ದೇಶಕರಾದ ಝೆಂಗ್ಶೆನ್ ಔ ಮತ್ತು ಜಾಂಗ್ ಜೀ ಅವರು ಭಾರತದಿಂದ ಪರಾರಿಯಾಗಿದ್ದಾರೆ.
ಇಡಿ ಮಂಗಳವಾರ ವಿವೋ ಮತ್ತು ಸಂಬಂಧಿತ ಸಂಸ್ಥೆಗಳ 44 ಸ್ಥಳಗಳಲ್ಲಿ ದಾಳಿ ನಡೆಸಿತ್ತು. ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯ ಸೆಕ್ಷನ್ಗಳ ಪ್ರಕರಣ ದಾಖಲಿಸಿದ ಇಡಿ ಉತ್ತರ ಪ್ರದೇಶ, ಮಧ್ಯಪ್ರದೇಶ ಸೇರಿದಂತೆ ದಕ್ಷಿಣ ಭಾರತದ ಹಲವು ಕಡೆಗಳಲ್ಲಿ ದಾಳಿ ನಡೆಸಿದೆ.
ಗ್ರ್ಯಾಂಡ್ ಪ್ರಾಸ್ಪೆಕ್ಟ್ ಇಂಟರ್ನ್ಯಾಷನಲ್ ಕಮ್ಯೂನಿಕೇಷನ್ ಪ್ರೈವೆಟ್ ಲಿಮಿಟೆಡ್ ಜಮ್ಮು ಕಾಶ್ಮೀರದಲ್ಲಿ ವಿವೋ ಫೋನ್ಗಳನ್ನು ಮಾರಾಟ ಮಾಡುತ್ತಿದೆ. ಈ ಕಂಪನಿಯ ಸುಳ್ಳು ದಾಖಲೆಗಳನ್ನು ನೀಡಿ ನೋಂದಣಿ ಮಾಡಿಕೊಂಡಿರುವ ವಿಚಾರ ತನಿಖೆಯ ವೇಳೆ ಬೆಳಕಿಗೆ ಬಂದಿದೆ.
ಇಬ್ಬರು ಕಂಪನಿ ಸೆಕ್ರೆಟರಿ ಮತ್ತು ಚಾರ್ಟರ್ಡ್ ಅಕೌಂಟೆಂಟ್ ಒಬ್ಬರಿಗೆ ಈ ವಿಚಾರ ಗೊತ್ತಿದ್ದರೂ ಸುಳ್ಳು ದಾಖಲೆ ಸೃಷ್ಟಿಸಿ ಅಕ್ರಮಕ್ಕೆ ಸಾಥ್ ನೀಡಿರುವುದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ. ಗ್ರ್ಯಾಂಡ್ ಪ್ರಾಸ್ಪೆಕ್ಟ್ ಕಂಪನಿ ಕೆವೈಸಿ ಮಾಹಿತಿಯನ್ನು ಸರಿಯಾಗಿ ನೀಡಿಲ್ಲ ಎಂಬ ಗಂಭೀರ ಆರೋಪ ಕೇಳಿ ಬಂದಿದೆ.
ಇಡಿ ದಾಳಿ ಬಳಿಕ ವಿವೋ ಕಂಪನಿ ತನಿಖೆಗೆ ಸಹಕಾರ ನೀಡಲಾಗುವುದು ಎಂದು ತಿಳಿಸಿತ್ತು. ಆದರೆ ಈಗ ಕಂಪನಿಯ ನಿರ್ದೇಶಕರು ಪರಾರಿಯಾಗಿರುವುದು ಹಲವು ಅನುಮಾನಗಳನ್ನು ಹುಟ್ಟಿಹಾಕಿದೆ.