ರಾಜ್ಯದಲ್ಲಿ ಭಾರೀ ಮಳೆಗೆ 12 ಮಂದಿ ಮೃತಪಟ್ಟಿದ್ದು, 50 ಕೋಟಿ ರೂ. ನಷ್ಟ ಉಂಟಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಶುಕ್ರವಾರ ಮಳೆಪೀಡಿತ ಪ್ರದೇಶಗಳ ಜಿಲ್ಲಾಧಿಕಾರಿಗಳು ಹಾಗೂ ಅಧಿಕಾರಿಗಳ ಜೊತೆ ಶುಕ್ರವಾರ ವೀಡಿಯೊ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ 13 ಜಿಲ್ಲೆಗಳಲ್ಲಿ ಮಳೆಯಿಂದ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಜೂನ್ 1ರಿಂದ ಇಲ್ಲಿಯವರೆಗೆ 12 ಮಂದಿ ಮೃತಪಟ್ಟಿದ್ದಾರೆ ಎಂದರು.
13 ಜಿಲ್ಲೆಗಳ ಬಹುತೇಕ ತಾಲೂಕುಗಳು ಪ್ರವಾಹ ಪರಿಸ್ಥಿತಿ ಎದುರಿಸಿದ್ದು, ಮಂಗಳೂರು, ಉಡುಪಿ, ಹಾಸನ ಸೇರಿದಂತೆ 4 ಜಿಲ್ಲೆಗಳಲ್ಲಿ ಸುಮಾರು 50 ಕೋಟಿ ರೂ. ಹಾನಿಯಾಗಿದೆ ಎಂದು ಅವರು ತಿಳಿಸಿದರು.
ರಾಜ್ಯದಲ್ಲಿ ಇದುವರೆಗೆ ಮಳೆಯಿಂದ 65 ಕ್ಕೂ ಹೆಚ್ಚು ಜಾನುವಾರುಗಳು ಅಸುನೀಗಿವೆ. ರಸ್ತೆಗಳು ಹಾಗೂ ವಿದ್ಯುತ್ ಕಂಬಗಳು ಮುರಿದು ಬಿದ್ದಿದ್ದು, ಬೆಳೆ ಹಾನಿ ಸಾಕಷ್ಟು ಸಂಭವಿಸಿದೆ ಎಂದು ಅವರು ಹೇಳಿದರು.
248 ಗ್ರಾಮಗಳ ರಸ್ತೆ ಸಂಪೂರ್ಣವಾಗಿ ಹಾನಿಗೀಡಾಗಿದ್ದು, ಶಿವಮೊಗ್ಗದಲ್ಲಿ 285 ಹೆಕ್ಟೇರ್, ಹಾಸನದಲ್ಲಿ50 ಹೆಕ್ಟೇರ್ ಮಳೆಯಾಗಿದ್ದು, ತುರ್ತು ಪರಿಹಾರವಾಗಿ 10 ಸಾವಿರ ರೂ. ವಿತರಿಸಲು ಸೂಚಿಸಲಾಗಿದೆ ಎಂದು ಅವರು ಹೇಳಿದರು.
ರಾಜ್ಯದಲ್ಲಿ 3-4 ದಿನಗಳಿಂದ ವಾಡಿಕೆಗಿಂತ ಅಧಿಕ ಮಳೆಯಾಗಿದ್ದು, ರಾಜ್ಯದಲ್ಲಿ ಇನ್ನೂ 4-5 ದಿನ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ ಎಂದು ಬೊಮ್ಮಾಯಿ ತಿಳಿಸಿದರು.