ಮಾಹಾರಾಷ್ಟ್ರ ಶಿವಸೇನೆಯಲ್ಲಿನ ಉದ್ದವ್ ಠಾಕ್ರೆ ಹಾಗೂ ಸಿಎಂ ಏಕನಾಥ್ ಶಿಂಧೆಯ ಬಣದ ಮೂಲ ಶಿವಸೇನಾ ಪೈಪೋಟಿ ಇದೀಗ ನ್ಯಾಯಾಲಯದ ಅಂಗಳದಲ್ಲಿದೆ.
ಇಂದು ವಿಚಾರಣೆ ನಡೆಸಿ ಮಧ್ಯಂತರ ಆದೇಶ ನೀಡಿರುವ ಸುಪ್ರಿಂಕೋರ್ಟ್ ತನ್ನ ಮುಂದಿನ ಆದೇಶದವರೆಗೆ ಶಿವಸೇನೆಯ ಠಾಕ್ರೆ ಬಣದ 15 ಜನ ಶಾಸಕರನ್ನು ಅನರ್ಹ ಮಾಡುವಂತಿಲ್ಲ ಎಂದು ಮಾಹಾರಾಷ್ಟ್ರ ಸಿಎಂಗೆ ಸೂಚಿಸಿದೆ.
ಉದ್ದವ್ ಠಾಕ್ರೆ ಮುಖ್ಯಮಂತ್ರಿಯ ಅವಧಿಯಲ್ಲಿ ಆಗಿನ ಉಪಸ್ಪೀಕರ್ ಶಿಂಧೆ ಬಣದ ಶಾಸಕರಿಗೆ ಅನರ್ಹತೆಯ ನೋಟಿಸ್ ಕಳುಹಿಸಿದ್ದರು. ಶಿಂಧೆ ಬಣ ಸ್ಪೀಕರ್ ಮೇಲೆ ಅವಿಶ್ವಾಸ ನಿರ್ಣಯ ಮಂಡಿಸಿದ್ದರಿಂದ ಈ ನಿರ್ಣಯ ನೆನೆಗುದಿಗೆ ಬಿದ್ದಿತ್ತು.
ಜೂನ್ 20 ರಂದು ಏಕನಾಥ್ ಶಿಂಧೆ ಬಿಜೆಪಿ ಪಕ್ಷದೊಡನೆ ಸೇರಿ ನೂತನ ಸರ್ಕಾರದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಈ ಬೆನ್ನಲ್ಲೇ, ವಿಶ್ವಸಮತೆ ಯಾಚನೆ ವೇಳೆ ಶಿಂಧೆ ಬಣದ ಮುಖ್ಯ ಸಚೇತಕ ಶಿವಸೇನಾ ಶಾಸಕರಿಗೆ ಏಕನಾಥ್ ಶಿಂಧೆ ಪರವಾಗಿ ಮತ ಚಲಾಯಿಸುವಂತೆ ವಿಪ್ ಹೊರಡಿಸಿದ್ದರು.
ಉದ್ದವ್ ಠಾಕ್ರೆ ಬಣದ 15 ಜನ ಶಾಸಕರು ವಿಪ್ ಉಲ್ಲಂಘಿಸಿ ಮತ ಚಲಾವಣೆ ಮಾಡಿದ್ದರು. ಈ ಶಾಸಕರನ್ನು ಅನರ್ಹ ಮಾಡುವಂತೆ ಶಿಂಧೆ ಬಣದ ಸಚೇತಕರು ಸ್ಪೀಕರ್ಗೆ ಮನವಿ ಮಾಡಿದ್ದರು. ಈ ಮನವಿಯನ್ನು ವಿರೋಧಿಸಿ ಉದ್ದವ್ ಠಾಕ್ರೆ ಬಣ ಸುಪ್ರಿಂ ಕೋರ್ಟ್ನಲ್ಲಿ ಮನವಿ ಸಲ್ಲಿಸಿತ್ತು.
ಇಂದು ವಿಚಾರಣೆ ನಡೆಸಿದ ಸುಪ್ರಿಂ ಕೋರ್ಟ್ ಮುಖ್ಯ ನ್ಯಾಮೂರ್ತಿ ಎನ್ವಿ ರಮಣ ನೇತೃತ್ವದ ಪೀಠ ಸ್ಪೀಕರ್ಗೆ ಯಾವುದೇ ನಿರ್ಧಾರ ಕೈಗೊಳ್ಳದಂತೆ ಸೂಚನೆ ನೀಡಿದೆ.
ಶಿವಸೇನೆ ಬಣ ಹಾಗೂ ಏಕನಾಥ್ ಶಿಂಧೆ ಬಣದ ನಡುವೆ ಮೂಲ ಶಿವಸೇನೆ ನಮ್ಮದು ಎಂಬ ವಾದ ನಡೆಯುತ್ತಿದೆ. ಏಕನಾಥ್ ಶಿಂಧೆ ಬಹುಮತ ಯಾಚನೆ ವೇಳೆ ಶಿವಸೇನೆಯ 55 ಜನ ಶಾಸಕರಲ್ಲಿ 40 ಜನ ಶಿಂಧೆ ಪರವಾಗಿ ಮತ ಚಲಾಯಿಸಿದ್ದಾರೆ.