ಬೆಂಗಳೂರಿನ ಯಶವಂತಪುರದಲ್ಲಿರುವ ಐಷಾರಾಮಿ ತಾಜ್ ಹೋಟೆಲ್ನಲ್ಲಿ ರಾಷ್ಟ್ರೀಯ ಮಟ್ಟದ ಕೃಷಿ ಸಮ್ಮೇಳನ ಆಯೋಜಿಸಲಾಗಿದೆ. ಇಂದು ಗುರುವಾರ ಈ ಸಮ್ಮೇಳನದ ಉದ್ಘಾಟನೆಯೂ ಆಗಿದೆ. ಆದರೆ, ಕೃಷಿ ಸಮ್ಮೇಳನವನ್ನು ಪಂಚತಾರಾ ಹೋಟೆಲ್ನಲ್ಲಿ ಮಾಡುವುದರ ಜರೂರು ಏನು ಎಂದು ಜನ ಸಾಮಾಜಿಕ ಜಾಲತಾಣಗಳ ಮೂಲಕ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಇಂದು ತಾಜ್ ಹೋಟೆಲ್ನಲ್ಲಿ ರಾಜ್ಯ ಕೃಷಿ ಮತ್ತು ತೋಟಗಾರಿಕೆ ಸಚಿವರ ರಾಷ್ಟ್ರೀಯ ಸಮ್ಮೇಳನದ ಉದ್ಘಾಟನೆಯಾಗಿದೆ. ಈ ಸಮ್ಮೇಳನದಲ್ಲಿ ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವ ನರೇಂದ್ರ ಸಿಂಗ್ ತೋಮರ್, ಕೇಂದ್ರ ಆರೋಗ್ಯ ಮತ್ತು ರಸಗೊಬ್ಬರ ಹಾಗೂ ರಾಸಾಯನಿಕ ಖಾತೆ ಸಚಿವ ಮನ್ಸುಕ್ ಮಾಂಡವಿಯಾ ಮತ್ತು ಭಗವಂತ್ ಖೂಬಾ, ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವರಾದ ಶೋಭಾ ಕರಂದ್ಲಾಜೆ, ರಾಜ್ಯದ ಕೃಷಿ ಸಚಿವ ಬಿಸಿ ಪಾಟೀಲ್ ಸೇರಿದಂತೆ ಹಲವು ಜನ ಗಣ್ಯರು ಈ ಸಮ್ಮೇಳನದಲ್ಲಿ ಭಾಗಿಯಾಗಿದ್ದಾರೆ.
ಮುಖ್ಯಮಂತ್ರಿ ಶ್ರೀ ಬಸವರಾಜ ಬೊಮ್ಮಾಯಿಯವರೂ ಈ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದಾರೆ.
ರಾಜ್ಯ ಕೃಷಿ ಮತ್ತು ತೋಟಗಾರಿಕೆ ಸಚಿವರ ರಾಷ್ಟ್ರೀಯ ಸಮ್ಮೇಳನವನ್ನು ಪ್ರಸಿದ್ಧ ಪಂಚಾತಾರಾ ಹೋಟೆಲ್ನಲ್ಲಿ ಆಯೋಜನೆ ಮಾಡಿ ಹಣಪೋಲು ಮಾಡುತ್ತಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತಪಡಿಸಲಾಗಿದೆ.