ಭಾರತಕ್ಕೆ ಸ್ವಾತಂತ್ರ್ಯ ಬಂದು ಮುಂದಿನ ಆಗಸ್ಟ್ 15ಕ್ಕೆ 75 ವರ್ಷ ಆಗ್ತಿದೆ. ಸ್ವಾತಂತ್ರ್ಯದ ಅಮೃತ ಮಹೋತ್ಸವ ಹಿನ್ನೆಲೆ ಕೇಂದ್ರ ಸರ್ಕಾರ `ಹರ್ ಘರ್ ತಿರಂಗಾ’ ಅಭಿಯಾನ ನಡೆಸಲು ಘೋಷಿಸಿದೆ. ಇದರ ಬೆನ್ನಲ್ಲೇ ರಾಜ್ಯದ ಪದವಿ, ಸ್ನಾತಕೋತ್ತರ ಪದವಿ ಕಾಲೇಜುಗಳು, ವಿವಿಗಳಲ್ಲಿ ಕಡ್ಡಾಯವಾಗಿ ತಿರಂಗ ಹಾರಿಸಬೇಕು ಎಂದು ಉನ್ನತ ಶಿಕ್ಷಣ ಇಲಾಖೆ ಆದೇಶಿಸಿದೆ.
ಶಾಲಾ ಶಿಕ್ಷಣ ಇಲಾಖೆ ಕೂಡ ಮಹತ್ವದ ಆದೇಶ ಹೊರಡಿಸಲು ಮುಂದಾಗಿದೆ. ಅಮೃತಮಹೋತ್ಸವ ಹಿನ್ನೆಲೆ ಆಗಸ್ಟ್ 11 ರಿಂದ 17ರ ವರೆಗೆ ರಾಜ್ಯದ ಎಲ್ಲ ಪ್ರಾಥಮಿಕ ಶಾಲೆಗಳು, ಪ್ರೌಢಶಾಲೆಗಳು, ಪಿಯುಸಿ ಕಾಲೇಜುಗಳು, ಮದರಸಾಗಳ ಮೇಲೂ ಕಡ್ಡಾಯವಾಗಿ ತಿರಂಗಾ ಹಾರಿಸಲೇಬೇಕು ಎಂದು ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಪತ್ರ ಬರೆದಿದ್ದಾರೆ.
ಸರ್ಕಾರಿ, ಅನುದಾನಿತ, ಅನದಾನ ರಹಿತ ಶಾಲಾ-ಕಾಲೇಜುಗಳು, ಎಲ್ಲಾ ಮದರಸಾಗಳು ಈ ಅದೇಶವನ್ನು ಪಾಲಿಸಬೇಕು. ತ್ರಿವರ್ಣ ಧ್ವಜದ ಜೊತೆಗೆ ಶಾಲೆ, ಕಾಲೇಜು, ಮದರಸಾಗಳಲ್ಲಿ ರಾಷ್ಟ್ರಭಕ್ತಿ ಮೂಡಿಸುವ ಸ್ವಾತಂತ್ರ್ಯದ ತ್ಯಾಗ, ಬಲಿದಾನ ಮೆಲುಕು ಹಾಕುವ ಗೀತ ಗಾಯನ ಕಾರ್ಯಕ್ರಮಗಳನ್ನು ಕಡ್ಡಾಯವಾಗಿ ನಡೆಸಬೇಕು. ಕ್ವಿಜ್, ಪ್ರಬಂಧ ಸ್ಪರ್ಧೆ, ಸ್ವಾತಂತ್ರ್ಯ ಹೋರಾಟಗಾರರು, ಸ್ವಾತಂತ್ರ್ಯ ಹೋರಾಟದ ಬಗ್ಗೆ ಚಿತ್ರ ಬಿಡಿಸುವ ಸ್ಪರ್ಧೆ ಆಯೋಜನೆ ಮಾಡಬೇಕು ಎಂದು ಸೂಚಿಸುವಂತೆ ಹೇಳಿದ್ದಾರೆ. ಮುಖ್ಯವಾಗಿ ಶಾಲಾ-ಕಾಲೇಜುಗಳ ಶಿಕ್ಷಕರು, ಉಪನ್ಯಾಸಕರು, ಬೋಧಕೇತರ ಸಿಬ್ಬಂದಿ ತಮ್ಮ ಮನೆಗಳ ಮೇಲೆ ರಾಷ್ಟ್ರಧ್ವಜ ಹಾರಿಸುವಂತೆ ಸೂಚನೆ ನೀಡಲಾಗುತ್ತಿದೆ.