ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ 2 ನೇ ಮೊಣ್ಣಂಗೇರಿ ಗ್ರಾಮದಲ್ಲಿ ಸೋಮವಾರ ರಾತ್ರಿ ಭೂಕುಸಿತ ಸಂಭವಿಸಿದೆ. ಭೂಕುಸಿತಕ್ಕೆ ಕೆಲವು ನಿಮಿಷಗಳ ಮೊದಲು ದೊಡ್ಡ ಶಬ್ದವೊಂದು ಕೇಳಿಸಿದೆ ಎಂದು ಇಲ್ಲಿನ ನಿವಾಸಿಗಳು ಹೇಳಿದ್ದಾರೆ.
2ನೇ ಮೊಣ್ಣಂಗೇರಿ ಗ್ರಾಮವು 2018 ರ ಭೂಕುಸಿತದಲ್ಲಿ ಹೆಚ್ಚು ಹಾನಿಗೊಳಗಾದ ಗ್ರಾಮಗಳಲ್ಲಿ ಒಂದಾಗಿದೆ. ರಾಮಕೊಲ್ಲಿ ಸೇತುವೆಯು ಅವೈಜ್ಞಾನಿಕ ಮತ್ತು ವಿಳಂಬ ಪರಿಹಾರ ಕಾರ್ಯಗಳಿಗೆ ಸಾಕ್ಷಿಯಾಗಿದೆ. ರಾಮಕೊಲ್ಲಿ ಸೇತುವೆಯ ಬಳಿ ಹೊಸದಾಗಿ ಭೂಕುಸಿತ ಸಂಭವಿಸಿದೆ.
ಘಟನಾ ಸ್ಥಳಕ್ಕೆ ಶಾಸಕರಾದ ಕೆ.ಜಿ.ಬೋಪಯ್ಯ, ಅಪ್ಪಚ್ಚು ರಂಜನ್, ಡಿಸಿ ಬಿ.ಸಿ.ಸತೀಶ ಸೇರಿದಂತೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಇಲ್ಲಿ ವೈಜ್ಞಾನಿಕ ಅಧ್ಯಯನದ ಅಗತ್ಯವಿದೆ ಎಂದು ಅಧಿಕಾರಿಗಳು ಮನಗಂಡಿದ್ದಾರೆ.
ಭೂಕುಸಿತದಿಂದ ಸೇತುವೆಗೆ ಹಾನಿಯಾಗಿದೆ. ಈ ಪ್ರದೇಶದಲ್ಲಿ ಮಾನವ ಚಟುವಟಿಕೆ ಹೆಚ್ಚಾಗಿಲ್ಲದಿದ್ದರೂ ಈ ರೀತಿ ಭೂಕುಸಿತವಾಗುವುದರ ಬಗ್ಗೆ ವೈಜ್ಞಾನಿಕ ಅಧ್ಯಯನದ ಅಗತ್ಯವಿದೆ ಎಂದು ಶಾಸಕ ಕೆ ಜಿ ಬೋಪಯ್ಯ ಹೇಳಿದ್ದಾರೆ.