ಕಂಬಳದ ಉಸೇನ್ ಬೋಲ್ಟ್ ಎಂದೇ ಖ್ಯಾತಿ ಪಡೆದ ಶ್ರೀನಿವಾಸಗೌಡ ವಿರುದ್ದ ಕ್ರಿಮಿನಲ್ ಪ್ರಕರಣದಲ್ಲಿ ದೂರು ಸಲ್ಲಿಸಲಾಗಿದೆ.
ಶ್ರೀನಿವಾಸಗೌಡ ವಿರುದ್ದ ಮಂಗಳೂರಿನ ಮೂಡಬಿದ್ರೆ ಪೊಲೀಸ್ ಠಾಣೆಗೆ ದಕ್ಷಿಣ ಕನ್ನಡ ಜಿಲ್ಲಾ ಕಂಬಳ ಸಮಿತಿ ಸದಸ್ಯ, ಕೋಣಗಳ ಯಜಮಾನ ಲೋಕೇಶ್ ಶೆಟ್ಟಿ ದೂರು ದಾಖಲಿಸಿದ್ದಾರೆ.
ಕಂಬಳ ಓಟಗಾರ ಶ್ರೀನಿವಾಸ ಗೌಡ, ಕಂಬಳ ಅಕಾಡೆಮಿ ನಡೆಸುವ ಗುಣಪಾಲ ಕಡಂಬ ಮತ್ತು ಲೇಸರ್ ಬೀಮ್ ಮೂಲಕ ಕಂಬಳದ ಫಲಿತಾಂಶ ಘೋಷಿಸುವ ಸ್ಕೈ ವೀವ್ ಮಾಲೀಕ ರತ್ನಾಕರ ಎಂಬವರ ವಿರುದ್ದ ಕ್ರಿಮಿನಲ್ ದೂರು ನೀಡಲಾಗಿದೆ. ಉಸೇನ್ ಬೋಲ್ಟ್ ದಾಖಲೆ ಮುರಿದ ಹೆಸರಲ್ಲಿ, ನಕಲಿ ದಾಖಲೆ ಸೃಷ್ಟಿಸಿ ಸರ್ಕಾರದ ಹಣ ಮತ್ತು ಸಾರ್ವಜನಿಕರಿಗೆ ವಂಚನೆ ಆರೋಪದಲ್ಲಿ ದೂರು ನೀಡಿದ್ದಾರೆ.
ಅಧಿಕೃತ ಮಾನ್ಯತೆ ಪಡೆಯದ, ನಂಬಲಾರ್ಹವಲ್ಲದ ಸ್ಕೈ ವೀವ್ ಸಂಸ್ಥೆಯಿಂದ ಸುಳ್ಳು ತೀರ್ಪಿನ ದಾಖಲೆ ನೀಡಲಾಗಿದೆ ಎಂದು ಲೋಕೇಶ್ ಶೆಟ್ಟಿ ಆರೋಪಿಸಿದ್ದಾರೆ.
ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ನಡೆಸದೇ ಇದ್ದರೆ ನ್ಯಾಯಾಲಯದಲ್ಲಿ ಖಾಸಗಿ ದಾವೆ ಹೂಡುವುದಾಗಿ ದೂರುದಾರರು ಹೇಳಿದ್ದಾರೆ.
2020ರ ಫೆಬ್ರವರಿ 1ರಂದು ಐಕಳ ಕಂಬಳದಲ್ಲಿ 100 ಮೀ. ದೂರವನ್ನು 9.55 ಸೆಕೆಂಡ್ನಲ್ಲಿ ಶ್ರೀನಿವಾಸ ಗೌಡ ಕ್ರಮಿಸಿದ್ದರು. 2009ರಲ್ಲಿ ಉಸೇನ್ ಬೋಲ್ಟ್ 100 ಮೀ. ಅನ್ನು 9.58 ಸೆಕೆಂಡ್ನಲ್ಲಿ ಕ್ರಮಿಸಿದ ದಾಖಲೆ ಉಡೀಸ್ ಮಾಡಿದ್ದರು. ರಾಜ್ಯ ಸರ್ಕಾರ ಸೇರಿ ದೇಶದ ಹಲವು ಸಂಸ್ಥೆಗಳು ಶ್ರೀನಿವಾಸ ಗೌಡಗೆ ಆ ಸಂದರ್ಭದಲ್ಲಿ ನೆರವು ನೀಡಿದ್ದವು.