ಅತ್ಯಂತ ಪ್ರಸಿದ್ಧಿ ಗಳಿಸಿದ್ದ ಪಬ್ಜಿ ಮೊಬೈಲ್ ಗೇಮ್ ಅನ್ನು ಭಾರತ ಈಗಾಗಲೇ ನಿಷೇಧ ಮಾಡಿ ಆದೇಶ ಹೊರಡಿಸಿತ್ತು. ಇದೀಗ, ಪಬ್ಜಿ ಗೇಮ್ನಂತೆಯೇ ಪ್ರಸಿದ್ದಿಯಾಗಿದ್ದ ಬಿಜಿಎಮ್ಐ (BGMI) ಮೊಬೈಲ್ ಗೇಮ್ ಅನ್ನು ನಿಷೇಧ ಮಾಡಲಾಗಿದೆ. ಈ ಮುನ್ನ ಕ್ರಾಫ್ಟನ್ ಎಂಬ ಕಂಪನಿ ರೂಪಿಸಿದ್ದ ಪಬ್ಜಿ ಮೊಬೈಲ್ ಗೇಮ್ ನಿಷೇಧಿಸಲಾಗಿತ್ತು.
ಆ ಮೂಲಕ ದಕ್ಷಿಣ ಕೊರಿಯಾದ ಗೇಮ್ ಡೆವಲಪರ್ ಕ್ರಾಫ್ಟನ್ ಸಂಸ್ಥೆ ರೂಪಿಸಿದ್ದ ಎರಡೂ ಗೇಮಿಂಗ್ ಆ್ಯಪ್ಗಳನ್ನು ಭಾರತ ಸರ್ಕಾರ ನಿಷೇಧಿಸಿದೆ.
ಸದ್ಯ ಈ ನಿಷೇಧದ ಬಗ್ಗೆ ಐಟಿ ಸಚಿವಾಲಯದಿಂದ ಇನ್ನೂ ಯಾವುದೇ ಅಧಿಕೃತ ಹೇಳಿಕೆಯಿಲ್ಲವಾದರೂ, ಬಿಜಿಎಮ್ಐ ಗೇಮ್ ಅನ್ನು ಗೂಗಲ್ ಪ್ಲೇ ಸ್ಟೋರ್ ಮತ್ತು ಆ್ಯಪಲ್ ಆಪ್ ಸ್ಟೋರ್ನಿಂದ ತೆಗೆದುಹಾಕಲಾಗಿದೆ ಎಂದು ದೃಢಪಡಿಸಲಾಗಿದೆ. ಕ್ರಾಫ್ಟನ್ ಕಂಪನಿಯು ಸಹ ಇದನ್ನು ಒಪ್ಪಿಕೊಂಡಿದೆ.
ಅಪ್ಲಿಕೇಶನ್ ಸ್ಟೋರ್ಗಳಿಂದ ಆಟವನ್ನು ತೆಗೆದುಹಾಕಲಾಗಿದ್ದರೂ, ನಿಮ್ಮ ಸ್ಮಾರ್ಟ್ಫೋನ್ನಲ್ಲಿ ನೀವು ಈಗಾಗಲೇ ಗೇಮ್ ಇನ್ಸ್ಟಾಲ್ ಇದ್ದರೆ ಸದ್ಯ ನೀವು ಈ ಗೇಮ್ ಆಡಬಹುದಾಗಿದೆ.
ಗೂಗಲ್ ಸಂಸ್ಥೆ ಆಟವನ್ನು ತೆಗೆದುಹಾಕಲು ಸರ್ಕಾರದಿಂದ ಅಧಿಕೃತ ಆದೇಶವನ್ನು ಸ್ವೀಕರಿಸಿದೆ ಎಂದು ಹೇಳಿದೆ.ಭಾರತದಲ್ಲಿ ಪ್ಲೇ ಸ್ಟೋರ್ನಲ್ಲಿ ಲಭ್ಯವಿರುವ ಅಪ್ಲಿಕೇಶನ್ಗೆ ಪ್ರವೇಶವನ್ನು ನಿರ್ಬಂಧಿಸಿದ್ದೇವೆ ಎಂದು ಗೂಗಲ್ ತಿಳಿಸಿದೆ.
ಬ್ಯಾಟಲ್ಗ್ರೌಂಡ್ಸ್ ಮೊಬೈಲ್ ಇಂಡಿಯಾ, ಜನಪ್ರಿಯ ಬ್ಯಾಟಲ್ ರಾಯಲ್ ಗೇಮ್ ಪಬ್ಜಿ ಮೊಬೈಲ್ನ ಭಾರತೀಯ ಆವೃತ್ತಿಯು ಇತ್ತೀಚೆಗೆ ದೇಶದಲ್ಲಿ 100 ಮಿಲಿಯನ್ ನೋಂದಾಯಿತ ಬಳಕೆದಾರರನ್ನು ದಾಟಿತ್ತು.