ಕೇರಳದಲ್ಲಿ ಇಂದು ಮಂಗಳವಾರ ಐದನೇ ಮಂಕಿಪಾಕ್ಸ್ ಪ್ರಕರಣ ದೃಢಪಟ್ಟಿದೆ.
30 ವರ್ಷ ವಯಸ್ಸಿನ ಸೋಂಕಿತ ವ್ಯಕ್ತಿ ಮಲಪ್ಪುರಂನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರು ಜುಲೈ 27ರಂದು ಯುಎಇಯಿಂದ ಕೋಜಿಕ್ಕೋಡ್ ವಿಮಾನ ನಿಲ್ದಾಣದ ಮೂಲಕ ಬಂದಿದ್ದರು ಎಂದು ಆರೋಗ್ಯ ಸಚಿವೆ ವೀಣಾ ಜಾರ್ಜ್ ಮಾಹಿತಿ ನೀಡಿದ್ದಾರೆ.
ದೇಶದಾದ್ಯಂತ ಈವರೆಗೆ ಒಟ್ಟು 7 ಮಂಕಿಪಾಕ್ಸ್ ಪ್ರಕರಣಗಳು ದೃಢಪಟ್ಟಿವೆ.
ಜುಲೈ 30ರಂದು ಮೃತಪಟ್ಟ ಕೇರಳದ 20 ವರ್ಷದ ಯುವಕನಿಗೆ ಮಂಕಿ ಪಾಕ್ಸ್ ಸೋಂಕು ತಗುಲಿರುವುದು ಮಾದರಿ ಪರೀಕ್ಷೆಯಲ್ಲಿ ದೃಢಪಟ್ಟಿದೆ ಎಂದು ಮೂಲಗಳು ಸೋಮವಾರ ಹೇಳಿದ್ದವು. ಈ ಕುರಿತು ಪರಿಶೀಲನೆ ನಡೆಸಲಾಗುತ್ತಿದೆ ಎಂದು ವೀಣಾ ಜಾರ್ಜ್ ಹೇಳಿದ್ದರು. ಈ ಮಧ್ಯೆ, ದೆಹಲಿಯಲ್ಲಿ ನೆಲೆಸಿರುವ ನೈಜಿರಿಯಾದ ಪ್ರಜೆಗೆ ಮಂಕಿಪಾಕ್ಸ್ ಸೋಂಕು ಇರುವುದು ಪರೀಕ್ಷೆಯಲ್ಲಿ ದೃಢಪಟ್ಟಿತ್ತು.
ದೇಶದಲ್ಲಿ ಮಂಕಿಪಾಕ್ಸ್ ಪ್ರಕರಣಗಳ ಹರಡುವಿಕೆ ಹೆಚ್ಚುತ್ತಿರುವ ಕಾರಣ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸಲು ಮತ್ತು ರೋಗ ಹರಡುವಿಕೆ ನಿಭಾಯಿಸಲು ಕೇಂದ್ರ ಸರ್ಕಾರ ಕಾರ್ಯಪಡೆ ರಚಿಸಿದೆ.