2018 ರಲ್ಲಿ ನಡೆದಿದ್ದ ತಮಿಳುನಾಡಿನ ಕಚನಾಥಮ್ ಗ್ರಾಮದಲ್ಲಿನ 3 ಜನ ದಲಿತರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆಯನ್ವಯ ಶಿವಂಗಂಗೈ ಜಿಲ್ಲೆಯ ವಿಶೇಷ ನ್ಯಾಯಾಲಯ ಶುಕ್ರವಾರ ಮೇಲ್ಜಾತಿಯ 27 ಜನರಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ.
ಅಗಸ್ಟ್ 1 ರಂದು ನ್ಯಾಯಾಲಯ ಎಲ್ಲಾ 27 ಜನ ಆರೋಪಿಗಳನ್ನು ಅಪಾಧಿತರು ಎಂದು ಪರಿಗಣಿಸಿತ್ತು. ನಿನ್ನೆ ಶುಕ್ರವಾರ ಈ ಬಗ್ಗೆ ತೀರ್ಪು ನೀಡಿದೆ. ನ್ಯಾಯಮೂರ್ತಿ ಜಿ ಮುಥುಕುಮಾರನ್ ಎಲ್ಲಾ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ನೀಡಿ ಆದೇಶಿಸಿದ್ದಾರೆ.
ತಮಿಳುನಾಡಿನ ಶಿವಗಂಗೈ ಜಿಲ್ಲೆಯ ತಿರುಪಚೆಟ್ಟಿ ಹತ್ತಿರದ ಕಚನಾಥಮ್ ಗ್ರಾಮದಲ್ಲಿ 2018 ರ ಮೇ 28 ರಂದು ಪರಿಶಿಷ್ಟ ವರ್ಗದವರಾದ ಆರುಮುಗಂ(65), ಷಣ್ಮುಗನಾಥನ್(31) ಹಾಗೂ ಚಂದ್ರಶೇಖರ್ (34) ಅವರನ್ನು ಕ್ರೂರವಾಗಿ ಹತ್ಯೆ ಮಾಡಲಾಗಿತ್ತು.
ದೇವಸ್ಥಾನದ ಉತ್ಸವದಲ್ಲಿ ಹರಕೆ ತೀರಿಸುವ ವಿಚಾರದಲ್ಲಿ ನಡೆದ ವೈಷಮ್ಯದಲ್ಲಿ ಪ್ರಬಲ ಸಮುದಾಯದ ಸದಸ್ಯರು ದಲಿತರನ್ನು ಕಡಿದು ಕೊಂದಿದ್ದರು. ಈ ದಾಳಿಯಲ್ಲಿ ಇನ್ನೂ ಐವರು ದಲಿತರಿಗೆ ಗಾಯಗಳಾಗಿವೆ. ಗಾಯಾಳುಗಳ ಪೈಕಿ ಠಾಣಶೇಖರನ್ (32) ಘಟನೆ ನಡೆದು ಒಂದೂವರೆ ವರ್ಷದ ಬಳಿಕ ಮೃತಪಟ್ಟಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಅವರನಡು ಗ್ರಾಮದ ಸುಮನ್, ಅರುಣ್ಕುಮಾರ್, ಚಂದ್ರಕುಮಾರ್ ಹಾಗೂ ರಾಜೇಶ್ ಸೇರಿದಂತೆ 33 ಜನರ ಮೇಲೆ ಚಾರ್ಜ್ಶೀಟ್ ಸಲ್ಲಿಸಿದ್ದರು. ಇದರಲ್ಲಿ 4 ಜನ ಆರೋಪಿಗಳು ಅಪ್ರಾಪ್ತರು. ಒಬ್ಬ ವಿಚಾರಣೆ ಸಮಯದಲ್ಲಿ ಸಾವನ್ನಪ್ಪಿದ್ದರೆ ಮತ್ತೊಬ್ಬ ತಲೆಮರೆಸಿಕೊಂಡಿದ್ದಾನೆ. ನ್ಯಾಯಾಲಯದಿಂದ ಶಿಕ್ಷೆಗೆ ಒಳಗಾದವರಲ್ಲಿ 3 ಜನ ಮಹಿಳೆಯರೂ ಇದ್ದಾರೆ.
ತೀರ್ಪು ಪ್ರಕಟಿಸಿದ ನ್ಯಾಯಮೂರ್ತಿಯವರು, 27 ಜನರಿಗೆ ಗಲ್ಲು ಶಿಕ್ಷೆ ವಿಧಿಸಿದರೆ ಇದು ಮತ್ತಷ್ಟು ಕ್ರೂರವಾಗಲಿದೆ. ಆದ್ದರಿಂದ ಜೀವಾವಧಿ ಶಿಕ್ಷೆ ನೀಡಲಾಗುತ್ತಿದೆ. ಎಲ್ಲರೂ ತಮ್ಮ ಜೀವನವನ್ನು ಜೈಲಿನಲ್ಲಿ ಕಳೆಯಲಿ ಎಂದು ಆದೇಶಿಸಿದ್ದಾರೆ.
ಅಲ್ಲದೇ, ಆರೋಪಿಗಳಿಂದ 13.3 ಲಕ್ಷ ಜಲ್ಮಾನೆ ವಸೂಲಿ ಮಾಡಬೇಕು. ಈ ಹಣವನ್ನು ಹತ್ಯೆಯಾದ ಕುಟುಂಬಗಳಿಗೆ ನೀಡಬೇಕು. ಇಷ್ಟು ಹಣ ಸಾಕಾಗದೇ ಇದ್ದಲ್ಲಿ ಮತ್ತಷ್ಟು ಹಣ ಸೇರಿಸಿ ನೀಡುವಂತೆ ಜಿಲ್ಲಅ ನ್ಯಾಯಾಂಗ ಪ್ರಾಧಿಕಾರಕ್ಕೆ ಸೂಚಿಸಿದ್ದಾರೆ.
ಶುಕ್ರವಾರ ಕೋರ್ಟ್ ತೀರ್ಪು ನೀಡುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಪೊಲೀಸರ ತಂಡ ಕೋರ್ಟ್ ಆವರಣದಲ್ಲಿತ್ತು.