ಕೆಲವೇ ದಿನಗಳಲ್ಲಿ ರಾಜ್ಯ ಬಿಜೆಪಿಯಲ್ಲಿ (BJP) ಮತ್ತು ಸಿಎಂ ಬಸವರಾಜ್ ಬೊಮ್ಮಾಯಿ (CM Basavaraj Bommai) ನೇತೃತ್ವದ ಸರ್ಕಾರದಲ್ಲಿ ದೊಡ್ಡ ಮಟ್ಟದ ಬದಲಾವಣೆ ಆಗಲಿದೆ ಎಂದು ನಿರೀಕ್ಷಿಸಲಾಗಿದೆ.
ಈ ನಡುವೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ (B S Yediyurappa) ಪುತ್ರ ವಿಜಯೇಂದ್ರಗೆ (Vijayendra) ಈ ಬಾರಿಯೂ ನಿರಾಸೆ ಖಚಿತ.
ರಾಜ್ಯಾಧ್ಯಕ್ಷ ಸ್ಥಾನ ಸಿಗಲ್ಲ:
ವಿಜಯೇಂದ್ರ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ಮಾಡಬಹುದು ಎಂಬ ಸುದ್ದಿಗಳು ಹರಿದಾಡುತ್ತಿವೆಯಾದರೂ ಮೂಲಗಳ ಪ್ರಕಾರ ವಿಜಯೇಂದ್ರಗೆ ರಾಜ್ಯಾಧ್ಯಕ್ಷ ಸ್ಥಾನ ಸಿಗಲ್ಲ.
ಒಂದು ವೇಳೆ ರಾಜ್ಯಾಧ್ಯಕ್ಷ ಸ್ಥಾನವನ್ನು ಕೊಟ್ಟರೆ ಆಗ ಇಡೀ ಪಕ್ಷವನ್ನೇ ಯಡಿಯೂರಪ್ಪನವರ ಪುತ್ರನ ಕೈಗೆ ಇಟ್ಟಂತೆ. ಅಂತಹ ಕೆಲಸಕ್ಕೆ ಬಿಜೆಪಿಯ ದೆಹಲಿ ನಾಯಕರು ಕೈ ಹಾಕುವ ಸಾಧ್ಯತೆಯೇ ಇಲ್ಲ.
DCM ಮಾಡಲ್ಲ:
ಆಗಸ್ಟ್ 15ರ ಬಳಿಕ ಆಗಲಿರುವ ಬದಲಾವಣೆಯಲ್ಲಿ ಮತ್ತೆ ಉಪ ಮುಖ್ಯಮಂತ್ರಿ ಹುದ್ದೆ ಸೃಷ್ಟಿ ಆಗಬಹುದು ಎನ್ನಲಾಗಿದೆಯಾದರೂ ಆ ಉಪ ಮುಖ್ಯಮಂತ್ರಿ ಹುದ್ದೆ ವಿಜಯೇಂದ್ರಗೆ ದಕ್ಕುವ ಸಾಧ್ಯತೆ ಇಲ್ಲ.
ಮಂತ್ರಿಯೂ ಆಗಲ್ಲ:
ಸಂಪುಟ ಬದಲಾವಣೆ ಬಹುತೇಕ ಖಚಿತವಾಗಿದೆಯಾದರೂ ಸಂಪುಟದಲ್ಲೂ ವಿಜಯೇಂದ್ರಗೆ ಮಂತ್ರಿ ಸ್ಥಾನ ಸಿ್ಗುವ ಸಾಧ್ಯತೆ ಇಲ್ಲ.
ಸದನದ ಸದಸ್ಯರಲ್ಲದವರು ಸಂಪುಟ ಸೇರಿದ ಆರು ತಿಂಗಳ ಒಳಗಾಗಿ ಶಾಸಕ (MLA) ಅಥವಾ ವಿಧಾನಪರಿಷತ್ ಸದಸ್ಯರಾಗುವುದು (MLC) ಕಡ್ಡಾಯ.
ಸಿ ಎಂ ಇಬ್ರಾಹಿಂ (C M Ibrahim) ಅವರ ರಾಜೀನಾಮೆಯಿಂದ ಖಾಲಿ ಆದ ಒಂದು ಪರಿಷತ್ ಸ್ಥಾನಕ್ಕೆ ಬಿಜೆಪಿ ಬಾಬುರಾವ್ ಚಿಂಚನಸೂರು ಅವರನ್ನು ನೇಮಿಸಿ ಅವಿರೋಧವಾಗಿ ಆಯ್ಕೆ ಆಗುವಂತೆ ಮಾಡಿದೆ.
ಈ ಮೂಲಕ ಒಂದು ವೇಳೆ ಮಂತ್ರಿ ಆಗುವುದಾದರೆ ವಿಜಯೇಂದ್ರ ಅವರಿಗೆ ಶಾಸನ ಸಭೆ ಪ್ರವೇಶಿಸಲು ಇದ್ದ ಅವಕಾಶವೂ ಕೈ ತಪ್ಪಿದೆ.
ಒಂದು ವೇಳೆ ಈಗ ಸಚಿವರಾದರೂ ಫೆಬ್ರವರಿಯೊಳಗೆ ಉಪ ಚುನಾವಣೆಯಲ್ಲಿ ಸ್ಪರ್ಧಿಸಿ ಶಾಸಕರಾಗಿ ಆಯ್ಕೆ ಆಗಬೇಕು, ಇಲ್ಲವಾದರೆ ಮಂತ್ರಿ ಸ್ಥಾನ ಕಳೆದುಕೊಳ್ಳಬೇಕಾಗುತ್ತದೆ. ಕರ್ನಾಟಕದಲ್ಲಿ ವಿಧಾನಸಭೆಗೂ ಮುನ್ನ ಉಪ ಚುನಾವಣೆ ನಡೆಯುವ ಸಾಧ್ಯತೆಯೇ ಇಲ್ಲ.
ಈ ಮೂಲಕ ಕರ್ನಾಟಕದಲ್ಲಿ ವಂಶ ರಾಜಕೀಯಕ್ಕೆ ತಿಲಾಂಜಲಿ ಇಡಲಿದ್ದೇವೆ ಎಂಬ ನಿರ್ಧಾರಕ್ಕೆ ಬಂದಿರುವ ಬಿಜೆಪಿಯ ದೆಹಲಿ ನಾಯಕರು ಯಡಿಯೂರಪ್ಪ ಪುತ್ರ ವಿಜಯೇಂದ್ರರಿಗೆ ದೊಡ್ಡ ಹುದ್ದೆ ಕೊಡುವ ಸಾಧ್ಯತೆ ಅತ್ಯಂತ ವಿರಳ.
ವಂಶರಾಜಕಾರಣಕ್ಕೆ ಮಣೆ ಹಾಕಲಾಗುತ್ತಿದೆ ಎಂಬ ಕಾರ್ಯಕರ್ತರ ಟೀಕೆಯೂ ವಿಜಯೇಂದ್ರಗೆ ಹಿನ್ನಡೆ ಆಗಬಹುದು.
ರಾಜಕೀಯವಾಗಿ ಯಡಿಯೂರಪ್ಪ ಮತ್ತು ವಿಜಯೇಂದ್ರ ಪರ್ಯಾಯ ನಿರ್ಧಾರಗಳನ್ನು ತೆಗೆದುಕೊಳ್ಳುವ ಸ್ಥಿತಿಯಲ್ಲಿ ಇಲ್ಲ. ಈ ಹಿನ್ನೆಲೆಯಲ್ಲಿ ಯಡಿಯೂರಪ್ಪ ಮತ್ತು ಅವರ ಪುತ್ರನ ಬೇಡಿಕೆಗಳಿಗೆ ಬಿಜೆಪಿಯ ದೆಹಲಿ ನಾಯಕರು ಕ್ಯಾರೇ ಎನ್ನದಿರುವ ಸಾಧ್ಯತೆಯೇ ಹೆಚ್ಚು.
ಯಡಿಯೂರಪ್ಪನವರ ಪ್ರಭಾವದಿಂದ ಕರ್ನಾಟಕದಲ್ಲಿ ಬಿಜೆಪಿಯನ್ನು ಹೊರತರುವ ನಿರ್ಧಾರ ಮಾಡಿರುವ ಹಿನ್ನೆಲೆಯಲ್ಲಿ ಮತ್ತೆ ತಂದೆ-ಮಗನ ಮಾತಿಗೆ ಪ್ರಾಶಸ್ತ್ಯ ಕೊಟ್ಟರೆ ನಿರೀಕ್ಷಿತ ಉದ್ದೇಶ ಈಡೇರಲ್ಲ ಎನ್ನುವುದು ಬಿಜೆಪಿ ನಾಯಕರ ಅಭಿಪ್ರಾಯ.
ರಾಜ್ಯ ಪ್ರವಾಸ ಕೈಗೊಳ್ಳುವುದಾಗಿ ಯಡಿಯೂರಪ್ಪ ಪದೇ ಪದೇ ಹೇಳುತ್ತಾ ಬಂದಿದ್ದರೂ ಇನ್ನೂ ದೆಹಲಿ ನಾಯಕರು ಒಪ್ಪಿಗೆ ನೀಡದೇ ಇರುವುದು ಕೂಡಾ ಇದೇ ಕಾರಣಕ್ಕೆ.
ADVERTISEMENT
ADVERTISEMENT