ಮಿಜೋರಾಂ ಮುಖ್ಯಮಂತ್ರಿ ಝೋರಮ್ತಂಗಾ ಅವರ ಪುತ್ರಿ ಮಿಲಾರಿ ಚಾಂಗ್ಟೆ, ವೈದ್ಯನ ಮೇಲೆ ಹಲ್ಲೆ ಮಾಡಿರುವ ಘಟನೆ ಶನಿವಾರ ವರದಿಯಾಗಿದೆ. ಬಳಿಕ ಮಗಳ ವರ್ತನೆಗಾಗಿ ಮುಖ್ಯಮಂತ್ರಿ ಝೋರಮ್ತಂಗಾ ಸಾರ್ವಜನಿಕವಾಗಿ ಕ್ಷಮೆಯಾಚಿಸಿದ್ದಾರೆ.
ಇತ್ತೀಚೆಗೆ ಕ್ಲಿನಿಕ್ನಲ್ಲಿ ಚರ್ಮರೋಗ ವೈದ್ಯನ ಮೇಲೆ ಮಿಲಾರಿ ಚಾಂಗ್ಟೆ ಹಲ್ಲೆ ಮಾಡಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
ಈ ಘಟನೆಯನ್ನು ಖಂಡಿಸಿ 800ಕ್ಕೂ ಹೆಚ್ಚು ವೈದ್ಯರು ಶನಿವಾರ ಪ್ರತಿಭಟನೆ ನಡೆಸಿದ್ದರು. ಭಾರತೀಯ ವೈದ್ಯಕೀಯ ಸಂಸ್ಥೆ (ಐಎಂಎ) ಮಿಜೋರಾಂ ವಿಭಾಗದ ವೈದ್ಯರು, ಘಟನೆಯನ್ನು ಖಂಡಿಸಿ ಕಪ್ಪು ಪಟ್ಟಿ ಧರಿಸಿ ಕೆಲಸಕ್ಕೆ ಹಾಜರಾಗಿದ್ದರು.
ಕ್ಲಿನಿಕ್ಗೆ ಹಾಜರಾಗುವ ಮೊದಲು ಅಪಾಯಿಂಟ್ಮೆಂಟ್ ಪಡೆಯುವಂತೆ ಕೇಳಿದ್ದಕ್ಕಾಗಿ ವೈದ್ಯನ ಮೇಲೆ ಹಲ್ಲೆ ನಡೆಸಲಾಗಿದೆ ಎನ್ನಲಾಗಿದೆ.
ಖುದ್ದಾಗಿ ವೈದ್ಯರನ್ನು ಭೇಟಿಯಾಗಿ ಕ್ಷಮೆಯಾಚಿಸಿದ್ದೇನೆ. ಅಲ್ಲದೆ ಮಗಳ ನಡವಳಿಕೆಯನ್ನು ಸಮರ್ಥಿಸಿಕೊಳ್ಳುವುದಿಲ್ಲ ಎಂದು ಮಿಜೋರಾಂ ಮುಖ್ಯಮಂತ್ರಿ ಝೋರಮ್ತಂಗಾ ಇನ್ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.