ಏಳು ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ 65 ವರ್ಷದ ವೃದ್ಧರೊಬ್ಬರಿಗೆ ಇಲ್ಲಿನ ಪೋಕ್ಸೋ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. ಆರೋಪಿ ನಾಗಪ್ಪನಿಗೆ ರೂ. 60,000 ದಂಡವನ್ನು ಹಾಕಲಾಗಿದೆ.
ಆರೋಪಿ ನಾಗಪ್ಪ 2020 ಸೆಪ್ಟೆಂಬರ್ 13 ರಂದು ಶಿವಮೊಗ್ಗ ತಾಲೂಕಿನ ಗ್ರಾಮವೊಂದರಲ್ಲಿ ಬಾಲಕಿ ಮೇಲೆ ಲೈಂಗಿಕ ಕಿರುಕುಳ ನೀಡಿದ್ದ. ಅಪ್ರಾಪ್ತೆ ಬಾಲಕಿ ಕೃಷಿ ಜಮೀನಿಗೆ ಹೋದಾಗ ಅಲ್ಲಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದ. ಈ ಸಂಬಂಧ ಮಹಿಳಾ ಪೊಲೀಸರು ನಾಗಪ್ಪ ವಿರುದ್ಧ ಪ್ರಕರಣ ದಾಖಲಿಸಿದ್ದರು. ಮಹಿಳಾ ಠಾಣೆ ಇನ್ಸ್ ಪೆಕ್ಟರ್ ಅಭಯ್ ಪ್ರಕಾಶ್ ಸೊಮಾನಲ್ ವಿಚಾರಣೆ ನಡೆಸಿ, ನಾಗಪ್ಪ ವಿರುದ್ಧ ಜಾರ್ಜ್ ಶೀಟ್ ದಾಖಲಿಸಿದ್ದರು.
ಪ್ರಾಸಿಕ್ಯೂಸನ್ ಪರವಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ ಹರಿ ಪ್ರಸಾದ್ ವಾದಿಸಿದರು. ಪೊಕ್ಸೋ ಕಾಯ್ದೆ 2012ರ ಸೆಕ್ಷನ್ 6ರ ಅಡಿಯಲ್ಲಿ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ಕೋರ್ಟ್ ನ್ಯಾಯಾಧೀಶ ಜೆ ಎಸ್ ಮೋಹನ್ ನಾಗಪ್ಪ ಅವರನ್ನು ದೋಷಿ ಎಂದು ಪರಿಗಣಿಸಿ, ಶನಿವಾರ ತೀರ್ಪು ಪ್ರಕಟಿಸಿದರು.
ಆರೋಪಿ ಒಂದು ವೇಳೆ ದಂಡ ಪಾವತಿಸುವಲ್ಲಿ ವಿಫಲನಾದಲ್ಲಿ ಹೆಚ್ಚುವರಿಯಾಗಿ ಆರು ತಿಂಗಳ ಕಾಲ ಸಾದಾ ಜೈಲು ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ.