ADVERTISEMENT
ಪ್ರಧಾನಿ ನರೇಂದ್ರ ಮೋದಿಯವರನ್ನು ಹೊಗಳಿ ಬರೆಯಲಾಗಿದ್ದ ಪುಸ್ತಕದ ಬಿಡುಗಡೆ ಕಾರ್ಯಕ್ರಮಕ್ಕೆ ಕರ್ನಾಟಕ ಸರ್ಕಾರವೇ ತನ್ನ ಬೊಕ್ಕಸದಿಂದ ಬರೋಬ್ಬರೀ 35 ಲಕ್ಷ ರೂಪಾಯಿ ಖರ್ಚು ಮಾಡಿದೆ.
ಈ ಬಗ್ಗೆ ದಿ ಫೈಲ್ ವರದಿ ಮಾಡಿದೆ.
ದಿ ಫೈಲ್ ವರದಿ ಪ್ರಕಾರ
ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಜುಲೈ 27ರಂದು ಪ್ರಧಾನಿ ಮೋದಿ ಬಗ್ಗೆ ಬರೆಯಲಾಗಿದ್ದ ಮೋದಿ @25 ಪುಸ್ತಕದ ಬಿಡುಗಡೆ ಕಾರ್ಯಕ್ರಮ ಮತ್ತು ಕಾರ್ಯಕ್ರಮದ ಪ್ರಸಾರ ಮತ್ತು ಪ್ರಚಾರಕ್ಕೆ ಸರ್ಕಾರ ಜನಸಾಮಾನ್ಯರ ತೆರಿಗೆ ಹಣವನ್ನು ಖರ್ಚು ಮಾಡಿದೆ.
ಈ ಕಾರ್ಯಕ್ರಮದಲ್ಲಿ ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಗಣ್ಯಾತಿಗಣ್ಯರು ಭಾಗವಹಿಸಿ ಪುಸ್ತಕ ಬಿಡುಗಡೆ ಮಾಡಿದ್ದರು.
ಗುಜರಾತ್ ಸಿಎಂ ಆಗಿದ್ದಾಗಿನಿಂದ ಹಿಡಿದು ಮೋದಿಯವರ 25 ವರ್ಷಗಳ ಆಡಳಿತ ವೈಖರಿ ಬಗ್ಗೆ ಬಿಜೆಪಿ ನಾಯಕ ಅಮಿತ್ ಶಾ, ಸುಧಾಮೂರ್ತಿ ಒಳಗೊಂಡಂತೆ ಹಲವು ಹೊಗಳಿ ಲೇಖನಗಳನ್ನು ಬರೆದಿದ್ದ ಪುಸ್ತಕ ಇದಾಗಿದೆ.
ವೇದಿಕೆಯ ಅಲಂಕಾರಕ್ಕೆ 6 ಲಕ್ಷದ 39 ಸಾವಿರ ರೂಪಾಯಿ ಖರ್ಚು ಮಾಡಲಾಗಿದೆ. ಆ ದಿನದ ಕಾರ್ಯಕ್ರಮಕ್ಕೆ ಜಿಎಸ್ಟಿ ತೆರಿಗೆ ಒಳಗೊಂಡು 24 ಲಕ್ಷದ 67 ಸಾವಿರ ರೂಪಾಯಿ ಖರ್ಚು ಮಾಡಲಾಗಿದೆ ಎಂದು ಆರ್ಟಿಐ ಕಾರ್ಯಕರ್ತ ಭೀಮನಗೌಡ ಪರಗೊಂಡ ಅವರು ಪಡೆದಿರುವ ಮಾಹಿತಿಯನ್ನು ಉಲ್ಲೇಖಿಸಿ ದಿ ಫೈಲ್ ವರದಿ ಮಾಡಿದೆ.
ADVERTISEMENT