ಕನ್ನಡ ಭಾಷೆ ಬಳಸಿರುವುದಕ್ಕೆ ಚೆಕ್ನ್ನು (Kannada Cheque) ಅಮಾನ್ಯ ಮಾಡಿದ್ದ ಭಾರತೀಯ ಸ್ಟೇಟ್ ಬ್ಯಾಂಕ್ಗೆ ಧಾರವಾಡ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ದಂಡ ವಿಧಿಸಿದೆ.
ಧಾರವಾಡದ ಕಲ್ಯಾಣ ನಗರ ನಿವಾಸಿ, ಇಂಗ್ಲಿಷ್ ಪ್ರಾಧ್ಯಾಪಕರಾದ ವಾದಿರಾಚಾರ್ಯ ಇನಾಮಾದಾರ ಅವರ ಚೆಕ್ ಅನ್ನು ಅಮಾನ್ಯ (Kannada Cheque) ಮಾಡಿದ್ದ ಎಸ್ಬಿಐ ನಡೆಗೆ ಆಕ್ಷೇಪಿಸಿ ಸಲ್ಲಿಸಿದ್ದ ದೂರಿನ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷರಾದ ಈಶಪ್ಪ ಭೂತೆ, ಸದಸ್ಯರಾದ ವಿ ಎ ಬೋಳಶೆಟ್ಟಿ ಮತ್ತು ಪಿ ಸಿ ಹಿರೇಮಠ ಅವರ ನೇತೃತ್ವದ ಪೀಠ ಈ ಆದೇಶ ಮಾಡಿದೆ ಎಂದು ಬಾರ್ ಅಂಡ್ ಬೆಂಚ್ ವರದಿ ಮಾಡಿದೆ. ಇದನ್ನೂ ಓದಿ : ಹರ್ಷ ಕುಟುಂಬಕ್ಕೆ ಹತ್ತು ಲಕ್ಷ ರೂಪಾಯಿ ಚೆಕ್ ನೀಡಿದ ಸಚಿವ ಈಶ್ವರಪ್ಪ ಪತ್ನಿ
ವರದಿ ಪ್ರಕಾರ, ಚೆಕ್ನಲ್ಲಿ ಕನ್ನಡ ಭಾಷೆ ಬಳಸಿದ್ದನ್ನು ಅರ್ಥಮಾಡಿಕೊಳ್ಳದೇ ಮತ್ತು ಕನ್ನಡ ಭಾಷೆಯ ಬಗ್ಗೆ ತೀರಾ ಅಸಡ್ಡೆ ಹಾಗೂ ಹೊಣೆಗೇಡಿತನವನ್ನು ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ತಾಲ್ಲೂಕಿನ ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್ಬಿಐ) ಸಿಬ್ಬಂದಿ ಪ್ರದರ್ಶಿಸಿ, ದೂರುದಾರರ ಚೆಕ್ ಅಮಾನ್ಯ ಮಾಡಿರುವುದು ಖೇದಕರ ಸಂಗತಿ ಎಂದು ಧಾರವಾಡ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಆದೇಶದಲ್ಲಿ ಹೇಳಿದ್ದು, ಎಸ್ಬಿಐಗೆ 85,177 ರೂ. ದಂಡ ವಿಧಿಸಿದೆ.
85,177 ರೂ. ಅನ್ನು ಸೆಪ್ಟೆಂಬರ್ 1ರಿಂದ ಮುಂದಿನ ಒಂದು ತಿಂಗಳಲ್ಲಿ ಎಸ್ಬಿಐ ಪಾವತಿಸಬೇಕು. ಇಲ್ಲವಾದಲ್ಲಿ ಚೆಕ್ ಅಮಾನ್ಯ ಮಾಡಲಾದ 2020ರ ಸೆಪ್ಟೆಂಬರ್ 5ರಿಂದ ದಂಡದ ಹಣ ಪಾವತಿ ಮಾಡುವವರೆಗೆ ಶೇ. 8ರಷ್ಟು ಬಡ್ಡಿ ದರ ಸೇರಿ ಹಣವನ್ನು ಪಾವತಿಸಬೇಕು ಎಂದು ಆಯೋಗ ಆದೇಶಿಸಿದೆ. ಇದನ್ನೂ ಓದಿ : ಸರ್ಕಾರಿ ಕಾರ್ಯಕ್ರಮಗಳಲ್ಲಿ ಕನ್ನಡ ಕಡ್ಡಾಯ – ರಾಜ್ಯ ಸರ್ಕಾರದಿಂದ ಆದೇಶ