ಮರಳು ವಿಲೇವಾರಿ ವ್ಯವಹಾರಕ್ಕೆ ಸಂಬಂಧಿಸಿ ಹಣಕಾಸಿನ ವ್ಯವಹಾರ ನಡೆಸುತ್ತಿದ್ದ ಆರೋಪದಲ್ಲಿ ಇಬ್ಬರು ಪೊಲೀಸ್ ಸಿಬ್ಬಂದಿಯನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.
ಜೇವರ್ಗಿ ಪೊಲೀಸ್ ಠಾಣೆಯ ಸಿಬ್ಬಂದಿ ಶಿವರಾಯ ಹಾಗೂ ವಾಹನ ಚಾಲಕ ಅವ್ವಣ್ಣ ಬಂಧಿತ ಪೊಲೀಸ್ ಸಿಬ್ಬಂದಿ.
ಮರಳು ವಿಲೇವಾರಿ ವ್ಯವಹಾರಕ್ಕೆ ಸಂಬಂಧಿಸಿ ಖಚಿತ ಮಾಹಿತಿಯನ್ನು ಆಧರಿಸಿ ಈ ದಾಳಿ ನಡೆದಿದೆ. ಲೋಕಾಯುಕ್ತ ಡಿ.ವೈ.ಎಸ್.ಪಿ ಸಿದ್ದಲಿಂಗಪ್ಪ ಗೌಡ ಪಾಟೀಲ್ ನೇತೃತ್ವದಲ್ಲಿ ಕಳೆದ ರಾತ್ರಿ ಜೇವರ್ಗಿ ಪೊಲೀಸ್ ವಸತಿ ನಿಲಯಕ್ಕೆ ದಾಳಿ ನಡೆಸಲಾಗಿದೆ. ಈ ವೇಳೆ ಹಣ ಸಮೇತ ಪರಾರಿಯಾಗಲು ಯತ್ನಿಸಿದ ಶಿವರಾಯನನ್ನು ಬೆನ್ನತ್ತಿ ಸೆರೆ ಹಿಡಿಯಲಾಗಿದೆ. ಜೊತೆಗೆ ಅವ್ವಣ್ಣನನ್ನೂ ಬಂಧಿಸಿದ್ದಾರೆಂದು ತಿಳಿದುಬಂದಿದೆ.
ಈ ಕಾರ್ಯಾಚರಣೆಯಲ್ಲಿ ಪಿ.ಐ. ಧ್ರುವತಾರೆ, ಅಕ್ಕಮಹಾದೇವಿ, ನಾನಾ ಗೌಡ, ಸಿಬ್ಬಂದಿಯಾದ ಪ್ರದೀಪ್ ಮತ್ತು ಸಿದ್ದಲಿಂಗ ಭಾಗವಹಿಸಿದ್ದರು.