ಪಿಎಸ್ಐ ಅಕ್ರಮ ನೇಮಕಾತಿ (PSI Recruitment Scam) ಪ್ರಕರಣದಲ್ಲಿ ಬಂಧಿತನಾಗಿರುವ ಎಡಿಜಿಪಿ ಅಮೃತ್ ಪೌಲ್ (ADGP Amruth Paul) ಅವರ ವಿರುದ್ಧ ಇಂದು ಸಿಐಡಿ ಪೊಲೀಸರು ಚಾರ್ಜ್ಶೀಟ್ ಸಲ್ಲಿಕೆ ಮಾಡಿದ್ದಾರೆ.
ಪಿಎಸ್ಐ ನೇಮಕಾತಿ ಪ್ರಕರಣದಲ್ಲಿ (PSI Recruitment Scam) ಪ್ರಮುಖ ಆರೋಪಿಯಾಗಿರುವ ಪೊಲೀಸ್ ನೇಮಕಾತಿ ವಿಭಾಗದ ಹೆಚ್ಚುವರಿ ಮಹಾನಿರ್ದೇಶಕರಾಗಿದ್ದ ಅಮೃತ್ ಪೌಲ್ರನ್ನು ಸೆಪ್ಟಂಬರ್ ತಿಂಗಳ ಆರಂಭದಲ್ಲಿ ಸಿಐಡಿ ಪೊಲೀಸರು 8 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ತೆಗೆದುಕೊಂಡು ವಿಚಾರಣೆ ನಡೆಸಿದ್ದರು. ಈ ವಿಚಾರಣೆ ಮುಗಿದ ಬೆನ್ನಲ್ಲೇ, ಚಾರ್ಜ್ಶೀಟ್ ಸಲ್ಲಿಕೆ ಮಾಡಲಾಗಿದೆ.
ಅಮೃತ್ ಪೌಲ್ ಅವರನ್ನು ಕಸ್ಟಡಿಗೆ ನೀಡಿದ್ದ 1ನೇ ಎಸಿಎಂಎಂ ಕೋರ್ಟ್ಗೆ ಸಿಐಡಿ ಹೆಚ್ಚುವರಿ ಚಾರ್ಜ್ಶೀಟ್ ಸಲ್ಲಿಕೆ ಮಾಡಿದೆ. ಒಟ್ಟು 1406 ಪುಟಗಳ ಚಾರ್ಜ್ ಶೀಟ್ ಇದಾಗಿದ್ದು, 78 ದಾಖಲೆಗಳು 38 ಸಾಕ್ಷಿಗಳ ಉಲ್ಲೇಖ ಮಾಡಲಾಗಿದೆ. ತನಿಖಾಧಿಕಾರಿ ಡಿವೈಎಸ್ಪಿ ಬಿ.ಕೆ.ಶೇಖರ್ ಅವರಿಂದ ಚಾರ್ಜ್ ಶೀಟ್ ಸಲ್ಲಿಕೆಯಾಗಿದೆ. ಪ್ರಕರಣದಲ್ಲಿ ಅಮೃತ್ ಪೌಲ್ ಅವರನ್ನು ಏಳನೇ ಆರೋಪಿಯನ್ನಾಗಿ ಹೆಸರಿಸಲಾಗಿದ್ದು, ಲಕ್ಷಾಂತರ ರೂಪಾಯಿ ಪಡೆದು ಅಕ್ರಮ ಎಸಗಿರುವ ಸಾಧ್ಯತೆ ಬಹಳವಾಗಿ ಎದ್ದು ಕಂಡಿದೆ. ಪೌಲ್ ಅವರು ಕೃತ್ಯ ಎಸಗಲು ಬಳಸಿರಬಹುದಾದ ಮೊಬೈಲ್, ಸಿಮ್ ಕಾರ್ಡ್ಗಳು ಹಾಗೂ ಅವರು ಹೊಂದಿರುವ ಬ್ಯಾಂಕ್ ಖಾತೆಗಳ ವಿವರಗಳನ್ನು ಕಲೆಹಾಕಿ, ಹಣದ ವರ್ಗಾವಣೆಯ ಬಗ್ಗೆ ತನಿಖೆ ನಡೆಸಿ ಚಾರ್ಜ್ಶೀಟ್ನಲ್ಲಿ ಹಾಕಲಾಗಿದೆ ಎನ್ನುವ ಮಾಹಿತಿ ಇದೆ.
ಬೆಂಗಳೂರಿನ ಹೈಗ್ರೌಂಡ್ಸ್ ಠಾಣೆಯಲ್ಲಿ ಇದೇ ಪ್ರಕಣದ ಕುರಿತು ದಾಖಲಾಗಿರುವ ಎಫ್ಐಆರ್ಗೆ ಕುರಿತು 2022ರ ಜು.4ರಂದು ಬಂಧಿತರಾಗಿದ್ದ ಪೌಲ್ ಅವರು ಜು.14ರವರೆಗೆ ಪೊಲೀಸ್ ಬಂಧನದಲ್ಲಿದ್ದರು. ಆ ನಂತರವೇ ಅವರನ್ನು ನ್ಯಾಯಾಂಗ ವಶಕ್ಕೆ ನೀಡಲಾಗಿತ್ತು. ಸಂಪೂರ್ಣ ಪ್ರಕಣದಲ್ಲಿ 34ನೇ ಆರೋಪಿಯಾಗಿರುವ ಪೌಲ್ ಅವರ ಜಾಮೀನು ಅರ್ಜಿಗಳನ್ನು 1ನೇ ಎಸಿಎಂಎಂ ನ್ಯಾಯಾಲಯ ಹಾಗೂ ಸೆಷನ್ಸ್ ನ್ಯಾಯಾಲಯ ತಿರಸ್ಕರಿಸಿವೆ.
ಇದನ್ನೂ ಓದಿ : ಪಿಎಸ್ಐ ಅಕ್ರಮ ನೇಮಕಾತಿ ಪ್ರಕರಣ : ಎಂಟ್ರಿ ಕೊಟ್ಟ ಇಡಿ; ಆರೋಪಿತರಿಗೆ ಮತ್ತೊಂದು ಸಂಕಷ್ಟ