ಭಾರತ್ ಜೋಡೋ ಯಾತ್ರೆ ಕರ್ನಾಟಕದಲ್ಲಿ ಆರಂಭವಾಗಿದೆ. ಗುಂಡ್ಲುಪೇಟೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಡೋಲು ಬಾರಿಸುವ ಮೂಲಕ ಭಾರತ್ ಜೋಡೋ ಯಾತ್ರೆಗೆ AICC ನಾಯಕ ರಾಹುಲ್ ಗಾಂಧಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಜಂಟಿಯಾಗಿ ಚಾಲನೆ ನೀಡಿದ್ದಾರೆ.
ವಿಶೇಷ ಅಂದರೇ, ಇದೇ ವೇದಿಕೆಯನ್ನು ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಒಗ್ಗೂಡಿಸುವಿಕೆಗೂ ರಾಹುಲ್ ಗಾಂಧಿ ಬಳಸಿಕೊಂಡಿದ್ದಾರೆ. ಮೊದಲು ಮೂವರು ನಾಯಕರು ಪ್ರತ್ಯೇಕವಾಗಿ ಡೋಲು ಬಾರಿಸಿದರು. ನಂತರ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಅವರ ಕೈ ಹಿಡಿದ ರಾಹುಲ್ ಗಾಂಧಿ ಇಬ್ಬರ ಜೊತೆ ಸೇರಿ ಡೋಲು ಬಾರಿಸಿದರು.
ಇಲ್ಲಿ ಗಮನಿಸಬೇಕಾದ ವಿಚಾರ ಎಂದರೇ, ದಾವಣಗೆರೆಯ ಸಿದ್ದರಾಮತ್ಸವದಲ್ಲಿಯೂ ಸಿದ್ದರಾಮಯ್ಯರನ್ನು ಅಪ್ಪಿಕೊಳ್ಳುವಂತೆ ಡಿಕೆ ಶಿವಕುಮಾರ್ ಗೆ ರಾಹುಲ್ ಗಾಂಧಿ ಕೈ ಸನ್ನೆ ಮಾಡಿದ್ದರು. ಅದರಂತೆ ಡಿಕೆ ಶಿವಕುಮಾರ್ ಕೂಡ ಮಾಡಿದ್ದರು.
ಪ್ರಗತಿಪರ ಸಾಹಿತಿ ದೇವನೂರು ಮಹಾದೇವ ಅವರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಂವಿಧಾನ ಉಳಿಸುವ ಈ ಹೋರಾಟಕ್ಕೆ ಬೆಂಬಲ ಸೂಚಿಸಿದರು.
ಕೋಮುವಾದಿ ರಾಜಕೀಯದ ವಿರುದ್ದ ಈ ಯಾತ್ರೆ
ಈ ಸಂಧರ್ಭದಲ್ಲಿ ಮಾತನಾಡಿದ ಸಿದ್ದರಾಮಯ್ಯ, ರಾಹುಲ್ ಗಾಂಧಿ ಅವರು ಕೇರಳ ತಮಿಳುನಾಡಿನಲ್ಲಿ ಪಾದಯಾತ್ರೆ ಮಾಡಿದ್ದಾರೆ. ಇವತ್ತು ಗುಂಡ್ಲುಪೇಟೆಯ ಮೂಲಕ ಕರ್ನಾಟಕದಲ್ಲಿ ಆರಂಭಿಸಿದ್ದಾರೆ.
ಕರ್ನಾಟಕದಲ್ಲಿ 8 ಜಿಲ್ಲೆಯಲ್ಲಿ 510 ಕಿ.ಮೀ.
ದೇಶದಲ್ಲಿ3570 ಕಿ.ಮೀ. ಪಾದಯಾತ್ರೆ ಮಾಡುತ್ತಿದ್ದಾರೆ. ಇದು ಸ್ವಾತಂತ್ರ್ಯ ನಂತರದ ಮಹಾ ಪಾದಯಾತ್ರೆ. ಒಂದೇ ಬಾರಿ ಇಷ್ಟೊಂದು ದೂರ ಯಾರು ಪಾದಯಾತ್ರೆ ಮಾಡಿರಲಿಲ್ಲ. ಕೋಮುವಾದಿಯ ರಾಜಕೀಯದಿಂದ ಬೇಸತ್ತು ರಾಹುಲ್ ಗಾಂಧಿ ಈ ಪಾದಯಾತ್ರೆ ಮಾಡುತ್ತಿದ್ದಾರೆ.
ವಾಜಪೇಯಿ ಸಂವಿಧಾನ ಬದಲಿಸಲು ಹೊರಟಿದ್ದರು
ನರೇಂದ್ರ ಮೋದಿ ಪ್ರಧಾನಿಯಾದ ಮೇಲೆ ದೇಶದಲ್ಲಿ ಕೋಮುದ್ವೇಷದ ರಾಜಕೀಯ ಹೆಚ್ಚಿದೆ. ಬಿಜೆಪಿ ಪ್ರಜಾಪ್ರಭುತ್ವದ ಮೇಲೆ, ಸಂವಿಧಾನದ ಮೇಲೆ ನಂಬಿಕೆ ಗೌರವ ಇಟ್ಟಿಲ್ಲ. ಬಿಜೆಪಿಯವರು ಒಬ್ಬ ನಾಯಕ ಹಾಗೂ ಒಂದು ಚಿಹ್ನೆಯ ಮೇಲೆ ನಂಬಿಕೆ ಇಟ್ಟಿದ್ದಾರೆ. ಅನೇಕ ಬಾರಿ ಬಿಜೆಪಿ ನಾಯಕರು ಸಂವಿಧಾನ ಬದಲಾಯಿಸುತ್ತೇವೆ ಎಂದು ಹೇಳಿದ್ದಾರೆ.
ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನಿಯಾಗಿದ್ದಾಗಲೇ ಸಂವಿಧಾನ ಬದಲಿಸಲು ಹೊರಟಿದ್ರು. ಆದರೆ, ಅಂದಿನ ರಾಷ್ಟ್ರಪತಿ ಕೆ.ನಾರಾಯಣನ್ ಇದಕ್ಕೆ ಅವಕಾಶ ಮಾಡಿಕೊಡಲಿಲ್ಲ.
ಬಿಜೆಪಿಯವರಿಗೆ ಸಿದ್ದರಾಮಯ್ಯ ವಾರ್ನಿಂಗ್
ದೇಶದ ಐಕ್ಯತೆಗಾಗಿ ರಾಹುಲ್ ಗಾಂಧಿ ಅವರು ತಗೆದುಕೊಂಡಿರುವ ಈ ನಿರ್ಧಾರ ಸ್ವಾಗತಾರ್ಹ. ದೇಶದಲ್ಲಿ ಅಶಾಂತಿ, ಬೆಲೆ ಏರಿಕೆ, ನಿರುದ್ಯೋಗ, ರೈತರು, ಮಹಿಳೆಯರ ಸಮಸ್ಯೆ ಇದೆ. ಭ್ರಷ್ಟಾಚಾರ ತಾಂಡವವಾಡುತ್ತಿದೆ. ಕರ್ನಾಟಕದಲ್ಲಿ ಬಿಜೆಪಿ 40% ಸರ್ಕಾರಎಂಬುದು ಜಗಜ್ಜಾಹೀರು ಆಗಿದೆ. ಇದರ ವಿರುದ್ಧ ಹೋರಾಡ ಮಾಡಬೇಕಾಗಿದೆ. ಅದಕ್ಕಾಗಿಯೆ ನಮ್ಮ ಈ ಹೋರಾಟ. ಆದರೆ, ಬಿಜೆಪಿಯವರಿಗೆ ಇದನ್ನು ಸಹಿಸಲು ಆಗುತ್ತಿಲ್ಲ. ನಮ್ಮ ಪೋಸ್ಟರ್ ಎಲ್ಲವನ್ನು ಹರಿದು ಹಾಕುತ್ತಿದ್ದಾರೆ. ನೀವು ಇದೇ ರೀತಿ ಮುಂದುವರೆದ್ರೆ ಬಿಜೆಪಿ ನಾಯಕರು ಓಡಾಡದ ರೀತಿ ಮಾಡುತ್ತೇವೆ ಎಂದು ಸಿದ್ದರಾಮಯ್ಯ ಎಚ್ಚರಿಕೆ ನೀಡಿದರು.
ಬಿಜೆಪಿಯವರಿಗೆ ಮಾತ್ರವಲ್ಲ ಪೊಲೀಸರಿಗೂ ಎಚ್ಚರಿಕೆ ನೀಡಿದ ಸಿದ್ದರಾಮಯ್ಯ
ನಾನು ಪೊಲೀಸರಿಗೆ ನೇರವಾಗಿ ಹೇಳ್ತೀನಿ. 6 ತಿಂಗಳ ನಿಂತರ ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರ ಬರುತ್ತೆ. ಪೊಲೀಸರು ಇದನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು.
ಪೊಲೀಸರು ಬಿಜೆಪಿ ಜೊತೆ ಶಾಮೀಲು ಆದ್ರೆ ಮುಂದೆ ನಿಮಗೆ ತಕ್ಕ ಶಾಸ್ತಿ ಮಾಡುತ್ತೇವೆ ಎಂದು ಸಿದ್ದರಾಮಯ್ಯ ವಾರ್ನಿಂಗ್ ನೀಡಿದರು.