11ಕೆವಿ ವಿದ್ಯುತ್ ತಂತಿ ತಾಕಿ ಮೃತಪಟ್ಟಿದ್ದ ಪಾವಗಡ ತಾಲ್ಲೂಕಿನ ಕೆಂಚಮ್ಮನಹಳ್ಳಿಯ ಮಂಗಳಗೌರಮ್ಮ ಕುಟುಂಬಕ್ಕೆ ಕಡೆಗೂ ಬೆಸ್ಕಾಂ ಅಧಿಕಾರಿಗಳು ಪರಿಹಾರ ನೀಡಲು ಒಪ್ಪಿಗೆ ಸೂಚಿಸಿದ್ದಾರೆ. ಮೃತ ಮಹಿಳೆ ಮಂಗಳಗೌರಮ್ಮ ಅವರ ಇಬ್ಬರು ಮಕ್ಕಳ ಹೆಸರಲ್ಲಿ 5.50 ಲಕ್ಷ ರೂಪಾಯಿ ಹಣವನ್ನು ಠೇವಣಿ ಇಡಲು ಬೆಸ್ಕಾಂ ಜೆಇ ಮುಂದಾಗಿದ್ದಾರೆ.
ಅಲ್ಲದೆ, ಸರ್ಕಾರದ ವತಿಯಿಂದ ಸಿಗಬಹುದಾದ ಸೌಲಭ್ಯಗಳನ್ನು ಕೊಡಿಸುವುದಾಗಿ ಬೆಸ್ಕಾಂ ಜೆಇ ಮೃತರ ಕುಟುಂಬಕ್ಕೆ ಭರವಸೆ ನೀಡಿದ್ದಾರೆ. ಹೀಗಾಗಿ ಮೃತರ ಕುಟುಂಬಸ್ಥರು ಪ್ರತಿಭಟನೆ ಕೈಬಿಟ್ಟಿದ್ದು, ಇಂದು ಕೆಂಚಮ್ಮನಹಳ್ಳಿಯಲ್ಲಿ ಮಂಗಳಗೌರಮ್ಮ ಅಂತ್ಯಕ್ರಿಯೆ ನೆರವೇರಲಿದೆ.
ಮಧ್ಯರಾತ್ರಿ ರಾಜಿ ಪಂಚಾಯ್ತಿ
ಮಂಗಳಗೌರಮ್ಮ ಅಕಾಲಿಕ ಸಾವು ಮತ್ತು ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯ, ಬೇಜವಾಬ್ದಾರಿ ಕುರಿತಾಗಿ ನಿಮ್ಮ ಪ್ರತಿಕ್ಷಣ ನ್ಯೂಸ್ ವಿವರವಾಗಿ ವರದಿ ಮಾಡಿತ್ತು. ಈ ಬೆನ್ನಲ್ಲೇ ಎಚ್ಚೆತ್ತ ಬೆಸ್ಕಾಂ ಜೆ ಇ ನೇತೃತ್ವದ ಅಧಿಕಾರಿಗಳು ಮಧ್ಯರಾತ್ರಿ 12ಗಂಟೆಗೆ ಸ್ಥಳಕ್ಕೆ ದೌಡಾಯಿಸಿ, ಮೃತರ ಕುಟುಂಬಸ್ಥರ ಕ್ಷಮೆ ಕೇಳಿ ರಾಜಿ ಪಂಚಾಯ್ತಿ ನಡೆಸಿದರು.
ಈ ಸಂದರ್ಭದಲ್ಲಿ ಪೊನ್ನಸಮುದ್ರ ಗ್ರಾಮದ ಈರಣ್ಣ ಸೇರಿ ಹಲವರು, ಪ್ರತಿಕ್ಷಣ ವರದಿಯನ್ನು ಪ್ರಾಸ್ತಾಪಿಸಿ ನ್ಯಾಯಕ್ಕಾಗಿ ಆಗ್ರಹಿಸಿದರು. ಕೊನೆಗೆ ನಸುಕಿನ ಜಾವ 3 ಗಂಟೆ ವೇಳೆಯಲ್ಲಿ ಮೃತ ಮಹಿಳೆಯ ಇಬ್ಬರು ಮಕ್ಕಳ ಭವಿಷ್ಯದ ದೃಷ್ಟಿಯಿಂದ ಆ ಹೆಸರಿನಲ್ಲಿ 5.50ಲಕ್ಷ ರೂಪಾಯಿ ಠೇವಣಿ ಇಡಲು ಒಪ್ಪಿಗೆ ಬೆಸ್ಕಾಂ ಜೆ ಇ ಒಪ್ಪಿಗೆ ಸೂಚಿಸಿದರು.
ಅಧಿಕಾರಿಗಳೇನೋ ಮೃತರ ಕುಟುಂಬಕ್ಕೆ ಪರಿಹಾರ ಕೊಟ್ಟು ಕೈತೊಳೆದುಕೊಂಡಿದ್ದಾರೆ. ಆದರೆ, ತಪ್ಪಿತಸ್ಥ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳುವ ಬಗ್ಗೆ ಮಾತನಾಡಿಲ್ಲ. ಜೊತೆಗೆ ಮತ್ತೊಂದು ಜೀವ ಬಲಿ ಆಗುವ ಮುನ್ನ ಎಚ್ಚೆತ್ತು, ಈ ಕೂಡಲೇ, ನೆಲ ಮಟ್ಟದಲ್ಲಿ ಹಾದು ಹೋಗಿರುವ 11ಕೆವಿ ತಂತಿಯನ್ನು ದುರಸ್ತಿ ಮಾಡಿಸಬೇಕಿದೆ. ಪಾವಗಡ ತಾಲ್ಲೂಕಿನ ವಿವಿಧೆಡೆ ಇಂತಹ ತಂತಿಗಳು ಇದ್ದಲ್ಲಿ ಸರಿಪಡಿಸಬೇಕಾದ ತುರ್ತು ಹೊಣೆಗಾರಿಕೆ ಬೆಸ್ಕಾಂ ಮೇಲಿದೆ.